

ಬೆಳ್ತಂಗಡಿ; ಚಿಕ್ಕಮಗಳೂರು ಜಿಲ್ಲೆಯ ದೇವಿರಮ್ಮ ಬೆಟ್ಟ ಹತ್ತುವಾಗ ನ.8 ರಂದು ಕುಸಿದು ಬಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ನಿವಾಸಿ ಲಕ್ಷ್ಮಣ್(35) ಎಂಬಾತ ಮೃತಪಟ್ಟಿದ್ದಾರೆ.
ಮಲ್ಲೇನಹಳ್ಳಿ ಕಡೆಯಿಂದ ಇರುವ ಮಾರ್ಗದಲ್ಲಿ ಬೆಟ್ಟ ಹತ್ತುತ್ತಿರುವಾಗ ಏಕಾಏಕಿ ಕುಸಿದು ಬಿದ್ದ ಲಕ್ಷ್ಮಣ್ ಮೃತಪಟ್ಟಿದ್ದಾರೆ.
ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಕೆಳಕ್ಕೆ ತಂದಿದ್ದು, ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಮಗಳೂರಿನ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಬೆಂಗಳೂರಿನಲ್ಲಿ ಬಾಷ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ್, ಹೂವಿನಹಳ್ಳಿಯಲ್ಲಿನ ತಮ್ಮ ಭಾವನ ಮನೆಗೆ ಬಂದಿದ್ದರು. ರಾತ್ರಿ ಪ್ರಯಾಣ ಮಾಡಿ ಬಂದಿದ್ದು, ಬೆಳಗಿನ ಜಾವ ಬೆಟ್ಟ ಹತ್ತಲು ಭಾವನೊಂದಿಗೆ ಹೋಗಿದ್ದರು. ಗುಡ್ಡದಲ್ಲಿ ಬೆಳಿಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಮಂಜು ಮುಸುಕಿತ್ತು. ಇದರ ನಡುವೆ ಬೆಟ್ಟ ಹತ್ತುವಾಗ ಲಕ್ಷ್ಮಣ್ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮತ್ತೊಂದೆಡೆ ಮಾಣಿಕ್ಯಾಧಾರ ಜಲಪಾತದ ಭಾಗದ ಮಾರ್ಗದಲ್ಲಿ ತೆರಳುತ್ತಿದ್ದ ಮಂಡ್ಯದ ಸುನೀಲ್(31) ಎಂಬುವರು ಕಾಲುಜಾರಿ ಬಿದ್ದಿದ್ದು, ಅವರನ್ನು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಭಕ್ತರು ರಕ್ಷಣೆ ಮಾಡಿ ಮೇಲೆತ್ತಿದ್ದಾರೆ. ಅವರು ಅಸ್ವಸ್ಥಗೊಂಡಿದ್ದು, ಅವರನ್ನು ಅಗ್ನಿಶಾಮಕ ಸಿಬ್ಬಂದಿ ಹೊತ್ತು ತಂದು ಆಸ್ಪತ್ರೆಗೆ ಸಾಗಿಸಿದ್ದಾರೆ.










