Home ಸ್ಥಳೀಯ ಸಮಾಚಾರ ಬೆಳ್ತಂಗಡಿ : ಅಸಹಜ ಸಾವು, ನಾಪತ್ತೆ ಪ್ರಕರಣಗಳ ತನಿಖೆಗೆ ಎಸ್‌ಐಟಿ ವ್ಯಾಪ್ತಿ ವಿಸ್ತರಣೆ ಕೋರಿ ಶಾಸಕ...

ಬೆಳ್ತಂಗಡಿ : ಅಸಹಜ ಸಾವು, ನಾಪತ್ತೆ ಪ್ರಕರಣಗಳ ತನಿಖೆಗೆ ಎಸ್‌ಐಟಿ ವ್ಯಾಪ್ತಿ ವಿಸ್ತರಣೆ ಕೋರಿ ಶಾಸಕ ಹರೀಶ್ ಪೂಂಜ ಅವರಿಗೆ ಜಯಂತ್ ಟಿ  ಮನವಿ

0

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 39/2025ಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೋರಿರುವ ಹೆಚ್ಚಿನ ತನಿಖೆಗೆ (Further Investigation) ರಾಜ್ಯ ಸರ್ಕಾರ ತಕ್ಷಣ ಆದೇಶ ಹೊರಡಿಸಬೇಕು ಹಾಗೂ 1976ರಿಂದ 2025ರ ಅವಧಿಯ ಎಲ್ಲಾ ಅಸಹಜ ಸಾವು (UDR), ನಾಪತ್ತೆ ಹಾಗೂ ಕೊಲೆ ಪ್ರಕರಣಗಳ ಕುರಿತು ಸಮಗ್ರ ತನಿಖೆ ಮುಂದುವರಿಸಬೇಕು ಎಂದು ಒತ್ತಾಯಿಸಿ ಜಯಂತ್ ಟಿ. ಅವರು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರಿಗೆ ಅ.23ರಂದು ಮನವಿ ಪತ್ರ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಶಿಫಾರಸಿನ ಮೇರೆಗೆ 19.07.2025ರಂದು ರಚನೆಯಾದ ಎಸ್‌ಐಟಿ, ಪ್ರಸ್ತುತ ಕೇವಲ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ವ್ಯಕ್ತಿಯ ಸಾಕ್ಷ್ಯ ಹಾಗೂ ಸ್ಥಳ ಉತ್ಖನನಕ್ಕೆ ಮಾತ್ರ ಸೀಮಿತವಾಗಿದೆ ಎಂದು ಮಹಿಳಾ ಆಯೋಗ ನಾಲ್ಕು ಬಾರಿ (29.10.2025, 31.10.2025, 12.01.2026, 06.08.2026) ಪತ್ರ ಬರೆದಿದ್ದರೂ, ಸರ್ಕಾರ ಇದುವರೆಗೆ ವ್ಯಾಪ್ತಿ ವಿಸ್ತರಣೆಗೆ ಆದೇಶ ನೀಡಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಎಸ್‌ಐಟಿ ಸ್ವತಃ ತನ್ನ ಪತ್ರಗಳಲ್ಲಿ ಒಪ್ಪಿಕೊಂಡಿರುವ ಪ್ರಮುಖ ಅಂಶಗಳನ್ನು ಮನವಿ ಪ್ರಸ್ತಾಪಿಸಿದೆ: ಬೆಳ್ತಂಗಡಿ ಠಾಣಾ ವ್ಯಾಪ್ತಿಯ 1998–2014ರ ಯು.ಡಿ.ಆರ್. ದಾಖಲೆಗಳಲ್ಲಿ 1,480 ಮತ್ತು 1,510ರ ನಡುವೆ 30 ಪ್ರಕರಣಗಳ ವ್ಯತ್ಯಾಸ, ಯು.ಡಿ.ಆರ್. 69/2003ರಲ್ಲಿ ಪೊಲೀಸ್ ಹಾಗೂ ಪಂಚಾಯತ್ ದಫನ ದಾಖಲೆಗಳ ನಡುವೆ ಅಸಾಮ್ಯತೆ,ಅಪರಾಧ ಸಂಖ್ಯೆ 83/2010ರ ಕಡತದಲ್ಲಿ ಮರಣೋತ್ತರ ಪರೀಕ್ಷಾ ವರದಿಯೇ ಕಾಣೆಯಾಗಿರುವುದು, ಪತ್ತೆಯಾದ 7 ತಲೆಬುರುಡೆಗಳ ಫೋರೆನ್ಸಿಕ್ ಪರೀಕ್ಷೆ ಬಾಕಿ ಇರುವುದು; ಹಾಗೂ ಸಾರ್ವಜನಿಕರಿಂದ ಈಗಾಗಲೇ ಸ್ವೀಕೃತವಾಗಿರುವ 73 ದೂರುಗಳು.

ವೇದವಲ್ಲಿ ಟೀಚರ್, ಪದ್ಮಲತಾ ಹಾಗೂ ಆನೆ ಮಾವುತ ಪ್ರಕರಣಗಳು ಸೇರಿದಂತೆ ಎಲ್ಲಾ ಹಳೆಯ ಪ್ರಕರಣಗಳನ್ನು ಡಿಜಿ ಮತ್ತು ಐಜಿಪಿ ಮೂಲಕ ಎಸ್‌ಐಟಿಗೆ ವರ್ಗಾಯಿಸಬೇಕು, ಫೋರೆನ್ಸಿಕ್/ಡಿಎನ್‌ಎ ಪರೀಕ್ಷೆ ಪೂರ್ಣಗೊಳಿಸಬೇಕು, ದಾಖಲೆ ತಿದ್ದುಪಡಿ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಾಕ್ಷಿ ರಕ್ಷಣೆ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 15 ದಿನಗಳೊಳಗೆ ಲಿಖಿತ ಉತ್ತರ ನೀಡುವಂತೆಯೂ ಪತ್ರದಲ್ಲಿ ಕೋರಲಾಗಿದೆ. ಸ್ಥಳಿಯ ಬೆಳ್ತಂಗಡಿ ತಾಲೂಕು ಶಾಸಕ ಹರೀಶ್ ಪೂಂಜಾ ಅವರು ಇದರ ವಿರುದ್ಧ ತನಿಖೆಗೆ ಸರ್ಕಾರವನ್ನು ಒತ್ತಾಯಿಸಿ ಆದೇಶ ಮಾಡದೆ ಇದ್ದರೆ,ಶಾಸಕರ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹಕ್ಕೆ ಸಿದ್ಧತೆಯನ್ನು ಮಾಡಲಾಗುವುದು ಎಂದು ಜಯಂತ್ ಟಿ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version