ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಹಿಂದಿನ ತನಿಖೆ ನಡೆಸಿದ್ದ ಪೊಲೀಸ್, ಸಿಐಡಿ ಹಾಗೂ ಸಿಬಿಐಗೆ ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ ವಿಶೇಷ ತನಿಖಾ ತಂಡ (ಎಸ್ಐಟಿ) ನೋಟಿಸ್ ಜಾರಿಗೊಳಿಸಿದೆ. ಈವರೆಗೆ ಅಂದಿನ ಬೆಳ್ತಂಗಡಿ ಪಿಎಸ್.ಐ ಆಗಿದ್ದ ಯೋಗೀಶ್ ಸೇರಿದಂತೆ ಅಂದು ಕರ್ತವ್ಯದಲ್ಲಿದ್ದ ಎಲ್ಲ ಪೊಲೀಸರಿಗೂ ನೋಟೀಸ್ ನೀಡಲಾಗಿದೆ. ಅದೇರೀತಿ ಪ್ರಕರಣದ ತನಿಖೆ ನಡೆಸಿದ ಇತರ ಅಧಿಕಾರಿಗಳೂ ಸೇರಿದಂತೆ 15ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ. 2012ರಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆರಂಭಗೊಂಡಿದ್ದ ತನಿಖೆಯಿಂದ ಹಿಡಿದು, ಬಳಿಕ ಸಿಐಡಿ ಮತ್ತು ಸಿಬಿಐ ನಡೆಸಿದ ತನಿಖೆಗಳವರೆಗೆ ಪ್ರಕರಣದೊಂದಿಗೆ ಸಂಬಂಧ ಹೊಂದಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲು ಎಸ್ಐಟಿ ಮುಂದಾಗಿದೆ.










