ಬೆಳ್ತಂಗಡಿ : ಜಮೀಯ್ಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಇಲ್ಲಿನ ಫಲಾಹ್ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಖಾಲಿದ್ ಪುಲಾಬೆ ಅವರು ಮಾತನಾಡಿ, ಜಮೀಯ್ಯತುಲ್ ಫಲಾಹ್ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ಪಡೆದ ಹಲವಾರು ಮಂದಿ ಇಂದು ಉನ್ನತ ಹುದ್ದೆಯಲ್ಲಿದ್ದು ಸಂಸ್ಥೆಗೆ ಸಹಕಾರ ನೀಡುತ್ತಿದ್ದಾರೆ. ನೀವೂ ಕೂಡ ಕಷ್ಟಪಟ್ಟು ಓದಿ ಉನ್ನತ ಹುದ್ದೆ ಅಲಂಕರಿಸಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕರಿಸುಂತಾಗಬೇಕು ಎಂದ ಅವರು ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನಿ ಗಳಾಗುತ್ತಿರುವುದು ಸಮಾಜಕ್ಕೆ ಕಂಟಕವಾಗಿದೆ, ಪೋಷಕರು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು” ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾತನಾಡಿ, “ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳು ಪ್ರಶಂಸನೀಯ. 40 ವರ್ಷಗಳ ಹಿಂದೆ ಬಿತ್ತಿದ ಬೀಜ ಇಂದು ಹೆಮ್ಮರವಾಗಿ ಶೈಕ್ಷಣಿಕ ರಂಗಕ್ಕೆ ಉತ್ತಮ ಕೊಡುಗೆ ನೀಡಿ, ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುತ್ತಿರುವುದು ಶ್ಲಾಘನೀಯ” ಎಂದರು.

ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ರಾಜಶ್ರೀ. ಬಿ ಅವರು ಮಾತನಾಡಿ, “ಇಂದಿನ ದಿನಗಳಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸುತ್ತಿರುವುದು ಪ್ರಶಂಸನೀಯ. ಹುಡುಗರು ಕೂಡ ಉತ್ತಮ ಅಂಕಗಳನ್ನು ಪಡೆದು ಮುಂದೆ ಬರಬೇಕು. ಸಂಘ ಸಂಸ್ಥೆಗಳಿಂದ
ನೀಡುವ ವಿದ್ಯಾರ್ಥಿ ವೇತನವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣದತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ವತಿಯಿಂದ ಪ್ರತಿ ವರ್ಷ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ಸುಮಾರು 120 ಆಯ್ದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ರಕ್ಷಿತ್ ಶಿವರಾಂ ಹಾಗೂ ಡಾ.ರಾಜಶ್ರೀ ಬಿ., ಅವರನ್ನು ಗೌರವಿಸಲಾಯಿತು
ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉಮರ್ ಬೆಳ್ತಂಗಡಿ, ಉಪಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಕಾಸಿಂ ಪದ್ಮುಂಜ, ಸಂಘಟನಾ ಕಾರ್ಯದರ್ಶಿ ಉಮರ್ ಕುಂಞಿ ನಾಡ್ಜೆ, ನಿಕಟಪೂರ್ವ ಅಧ್ಯಕ್ಷ ಶೇಕುಂಞಿ , ಅಬ್ಬೊನು ಮದ್ದಡ್ಕ, ಹಕೀಮ್ ಸುನ್ನತ್ ಕೆರೆ, ಕೆ.ಎಸ್. ಅಬೂಬಕರ್, ಅಬ್ದುಲ್ಲ ಕರಾಯ, ಅಬ್ಬಾಸ್ ಮದ್ದಡ್ಕ, ಕಾಸಿಂ ಮಲ್ಲಿಗೆ ಮನೆ, ಎಸ್.ಎಂ. ಕೋಯಾ ತಂಙಳ್, ಹಬೀಬ್ ಸಾಹೇಬ್, ನಿವೃತ್ತ ಡಿಎಫ್ಓ ಮಹಮದ್ ಹಾಗೂ ಆಜೀವ ಸದಸ್ಯರು ಉಪಸ್ಥಿತರಿದ್ದರು.
ಜಮೀಯ್ಯತುಲ್ ಫಲಾಹ್ ಮಾಜಿ ಜಿಲ್ಲಾಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಕಿರಾಅತ್ ಪಠಿಸಿ, ಸಂಸ್ಥೆಯು ನಡೆದು ಬಂದ ದಾರಿಯ ಬಗ್ಗೆ ಮಾಹಿತಿ ನೀಡಿದರು. ಜೊತೆ ಕಾರ್ಯದರ್ಶಿ ಆಲಿಯಬ್ಬ ಪುಲಾಬೆ ಸ್ವಾಗತಿಸಿ,
ಕೋಶಾಧಿಕಾರಿ ಎಸ್.ಎಂ.ಎಸ್. ಇಬ್ರಾಹಿಂ ವಂದಿಸಿದರು, ಅಶ್ರಫ್ ಅಲಿ ಕುಂಞಿ ಕಾರ್ಯಕ್ರಮ ನಿರೂಪಿಸಿದರು.