ಬಂಟ್ವಾಳ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳದ ಪಲ್ಲಮಜಲು ನಿವಾಸಿ ಅಜಿತ್ ಕುಮಾರ್ ಶೆಟ್ಟಿ (28) ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ಅ.18ರಂದು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ಬಿ ಮೂಡಾ ಗ್ರಾಮದ ಉದಯ್ ಎಂಬವರು ಆರೋಪಿಯಿಂದ ಹಣವನ್ನು ಮರಳಿ ನೀಡುವಂತೆ ಕೇಳುತ್ತಿದ್ದರು. ಅ.17ರಂದು ರಾತ್ರಿ ಹಣ ವಾಪಸ್ ನೀಡುವುದಾಗಿ ತಿಳಿಸಿದ ಆರೋಪಿ, ಉದಯ್ ಅವರನ್ನು ಪಲ್ಲಮಜಲು ಜಂಕ್ಷನ್ಗೆ ಬರುವಂತೆ ತಿಳಿಸಿದ್ದಾನೆ. ಅದರಂತೆ ಹಣ ಪಡೆಯಲು ಉದಯ್ ಸ್ಥಳಕ್ಕೆ ತೆರಳಿದಾಗ, ಆರೋಪಿ ಚೂರಿಯಿಂದ ಇರಿದಿದ್ದಾನೆ ಎನ್ನಲಾಗಿದೆ.
ಈ ವೇಳೆ ಸ್ಥಳಕ್ಕೆ ಬಂದ ಉದಯ್ ಅವರ ಸಹೋದರ ಲೋಕೇಶ್ ತಡೆಯಲು ಮುಂದಾದಾಗ, ಆರೋಪಿಯು ಅವರನ್ನು ಅಟ್ಟಿಸಿಕೊಂಡು ಬಂದಿದ್ದಾನೆ. ಗಾಯಗೊಂಡ ಉದಯ್ ಅವರನ್ನು ಸ್ಥಳೀಯರು ಮೊದಲು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 144/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 118(2), 109(1) ಮತ್ತು 351(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
