ಬೆಳ್ತಂಗಡಿ; ಎಸ್‌ಐಆರ್ ಫಾರಂ ನಂಬ್ರ 7 ನ್ನು ದುರುಪಯೋಗಪಡಿಸಿ ಮತದಾರರ ಪಟ್ಟಿಯಿಂದ ಮುಸ್ಲಿಮರ ಹೆಸರುಗಳನ್ನು ಕೈ ಬಿಡುವಂತೆ ಹುನ್ನಾರ ನಡೆಸಿ ಜನಾಂಗೀಯ ವೈಷಮ್ಯ ಹರಡಲು ಯತ್ನಿಸಿದವರ ಮೇಲೆ ಸುಮೊಟೋ ಪ್ರಕರಣ ದಾಖಲಿಸುವ ಸುನ್ನೀ ಸಂಯುಕ್ತ ಜಮಾಅತ್ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಬೆಳ್ತಂಗಡಿ ಆರಕ್ಷಕ ಠಾಣಾಧಿಕಾರಿಗಳಿಗೆ ಮತ್ತು ತಾಲೂಕು ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಸಂಯುಕ್ತ ಜಮಾಅತ್ ನಾಯಕರು, ತಹಶಿಲ್ದಾರರು ಹಾಗೂ ಪೊಲೀಸ್ ಇಲಾಖೆ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಲಂಕಷವಾಗಿ ತನಿಖೆ ನಡೆಸಿ, ತಪ್ಪಿತಸ್ಥರು ಎಷ್ಟೇ ದೊಡ್ಡ ಪ್ರಭಾವಿಗಳಾದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ತಾಲೂಕಿನ 80 ಕ್ಕೂ ಮಿಕ್ಕ ಜಮಾಅತರ ಒಕ್ಕೂಟದ ಈ ಮನವಿಗೆ ಶೀಘ್ರವಾಗಿ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರವಾದ ಪ್ರತಿರೋಧ ನಡೆಸಲು ಈಗಾಗಲೇ ಅಭಿಪ್ರಾಯಪಡಲಾಗಿದೆ ಎಂದರು.
ಇದೇ ವೇಳೆ ಮನವಿ ಸ್ವೀಕರಿಸಿದ ಅಧಿಕಾರಿಗಳು ಮಾತನಾಡಿ, ಮೇಲಧಿಕಾರಿಗಳ ಮಾರ್ಗದರ್ಶನ ಪಡೆದು ಶೀಘ್ರವಾಗಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.
ಸುನ್ನೀ ಸಂಯುಕ್ತ ಜಮಾಅತ್ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್, ವಿವಿಧ ಸಂಘ ಕುಟುಂಬಗಳ ನಾಯಕರಾದ ಸಯ್ಯಿದ್ ಎಸ್ ಎಂ ಕೋಯ ತಂಙಳ್, ಅಬ್ದುರ್ರಹ್ಮಾನ್ ಸಖಾಫಿ, ಎಂಬಿಎಂ ಸ್ವಾದಿಕ್ ಮಾಸ್ಟರ್, ಮುಹಮ್ಮದ್ ರಫೀ ಬೆಳ್ತಂಗಡಿ, ಅಬ್ಬೋನು ಮದ್ದಡ್ಕ, ಅಬ್ಬಾಸ್ ಬಟ್ಲಡ್ಕ, ಕಾಸಿಂ ಪದ್ಮುಂಜ, ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್, ಅಶ್ರಫ್ ಆಲಿಕುಂಞಿ ಮುಂಡಾಜೆ, ಸಲೀಂ ಕನ್ಯಾಡಿ, ಕೆ ಎಸ್ ಅಬ್ದುಲ್ಲಾ, ತ್ವಾಹಿರ್ ಸಖಾಫಿ ಕಾಜೂರು, ಇಬ್ರಾಹಿಂ ಕಕ್ಕಿಂಜೆ, ಅಬ್ದುಲ್ ನಾಸಿರ್, ಹಂಝತ್ ಪದ್ಮುಂಜ, ಸ್ವಾಲಿಹ್ ಪದ್ಮುಂಜ ಮೊದಲಾದವರು ಭಾಗವಹಿಸಿದ್ದರು.










