ಉಜಿರೆ: ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಭಜನೆ ಅತ್ಯಂತ ಸರಳ ಮಾರ್ಗವಾಗಿದ್ದು, ಭಜನೆಯಿಂದ ಭಗವಂತನ ಸಾಕ್ಷಾತ್ಕಾರವಾಗಿ ಭಜಕರಲ್ಲಿ ಉತ್ತಮ ಸಂಸ್ಕಾರ ಮೂಡಿ ಬರುತ್ತದೆ ಎಂದು ಮೈಸೂರಿನ ಸುತ್ತೂರು ಮಠದ ಪೂಜ್ಯ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ೨೮ ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಭಗವಂತನ ಸಾಕ್ಷಾತ್ಕಾರಕ್ಕೆ ಹಲವಾರು ಮಾರ್ಗಗಳಿದ್ದರೂ ಶ್ರದ್ಧಾ-ಭಕ್ತಿಯಿಂದ ರಾಗ, ತಾಳ, ಲಯಬದ್ಧವಾಗಿ ಶಿಸ್ತಿನಿಂದ ಭಜನೆ ಹಾಡಿದರೆ ಸುಲಭದಲ್ಲಿ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು. ನಾಡಿನ ಅನೇಕ ಸಾಧು-ಸಂತರು, ಮೀರಾಬಾಯಿಯಂತಹ ಸಾಧಕರು ಭಕ್ತಿಯಿಂದ ತಮ್ಮನ್ನು ತಾವು ಸಮರ್ಪಿಸಿಕೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.
ಇಸ್ಕಾನ್‌ನವರು ವಿದೇಶಗಳಲ್ಲಿ ಕೂಡಾ ಭಜನೆ ಮೂಲಕ ದೇವರ ಅನುಗ್ರಹಕ್ಕೆ ಪಾತ್ರರಾಗುವ ಬಗ್ಯೆ ಅರಿವು, ಜಾಗೃತಿ ಮೂಡಿಸಿದ್ದಾರೆ.
ಭಜನೆಯಿಂದ ನಮ್ಮಲ್ಲಿರುವ ಸಾತ್ವಿಕಶಕ್ತಿ ಜಾಗೃತವಾಗಿ ನೈತಿಕತೆಯೊಂದಿಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಪ್ರಾರ್ಥನೆ, ಜಪ, ತಪ, ಧ್ಯಾನ ಇದ್ದಲ್ಲಿ ಭಕ್ತರು ಮತ್ತು ಭಗವಂತನ ಮಧ್ಯೆ ಅವಿನಾಭಾವ ಸಂಬಂಧ ಮೂಡಿ ಬರುತ್ತದೆ ಎಂದು ಸ್ವಾಮೀಜಿ ಹೇಳಿದರು.

ಎಲ್ಲಾ ವಿಷಯಗಳಲ್ಲಿಯೂ ಸೂಕ್ಷ್ಮಗ್ರಾಹಿಯಾದ ವೀರೇಂದ್ರ ಹೆಗ್ಗಡೆಯವರು ಹತ್ತು-ಹಲವು ಜನಮಂಗಳ ಕಾರ್ಯಗಳನ್ನು ಮಾಡಿ “ರಾಜರ್ಷಿ” ಯಾಗಿರುವುದು ಎಲ್ಲರಿಗೂ ಸಂತಸ ಮತ್ತು ಅಭಿಮಾನದ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಸನಾತನ ಸಂಸ್ಕೃತಿಯ ಪುನರುತ್ಥಾನಕ್ಕೆ ಕೃಷಿಸಂಸ್ಕೃತಿ ಮತ್ತು ಋಷಿಸಂಸ್ಕೃತಿಯನ್ನು ಮರೆಯಬಾರದು. ಭಜನೆಯಿಂದ ನಾಲಗೆ ಪವಿತ್ರವಾಗಿ ಸಾರ್ಥಕ ಬದುಕಿಗೆ ಸ್ಪೂರ್ತಿ ದೊರಕುತ್ತದೆ. ಭಾವುಕರಾಗಿ ಭಜನೆ ಹಾಡುವುದರಿಂದ ಜೀವನಮಟ್ಟ ಸುಧಾರಣೆಯೊಂದಿಗೆ ನೈತಿಕ ಹಾಗೂ ಧಾರ್ಮಿಕ ಮಟ್ಟವೂ ಉನ್ನತಿಗೇರುತ್ತದೆ ಎಂದು ಅವರು ಹೇಳಿದರು. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಸಲ್ಲದು ಎಂದು ಅವರು ತಿಳಿಸಿದರು.
ಸುಶ್ರಾವ್ಯವಾಗಿ ಭಜನೆಯೊಂದನ್ನು ಹಾಡಿ, ಸ್ವಾಮೀಜಿ ಶ್ರೋತೃಗಳ ಮುಕ್ತ ಪ್ರಶಂಸೆಗೆ ಪಾತ್ರರಾದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶಿಬಿರಾರ್ಥಿಗಳು ಕಮ್ಮಟದಲ್ಲಿ ಪಡೆದ ಅನುಭವವನ್ನು ಸದುಪಯೋಗ ಮಾಡಿ ಆಯಾ ಊರಿನ ನಾಯಕರಾಗಿ ಪ್ರಗತಿಯ ರೂವಾರಿಗಳಾಗಬೇಕು. ನಿತ್ಯವೂ ರಾಗ, ತಾಳ, ಲಯಬದ್ಧವಾಗಿ ಭಜನೆ ಹಾಡಿ ಸಾರ್ಥಕ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಕಮ್ಮಟದಲ್ಲಿ ಉತ್ತಮ ತರಬೇತಿ ಮತ್ತು ಮಾರ್ಗದರ್ಶನ ನೀಡಿದ ಸಂಪನ್ಮೂಲ ವ್ಯಕ್ತಿಗಳನ್ನು ಮತ್ತು ಹಿರಿಯ ವಿದ್ವಾಂಸರನ್ನು ಹೆಗ್ಗಡೆಯವರು ಅಭಿನಂದಿಸಿದರು.
ಶಿಬಿರಾರ್ಥಿಗಳಿAದ ಸಾಮೂಹಿಕ ನೃತ್ಯ ಭಜನೆ ಮತ್ತು ಕುಣಿತ ಭಜನೆ ನಡೆಯಿತು.
ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾಹರ್ಷೇಂದ್ರ ಕುಮಾರ್, ಐಶ್ವರ್ಯನಿಶ್ಚಲ್ ಕುಮಾರ್ ಉಪಸ್ಥಿತರಿದ್ದರು.
ಭಜನಾ ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ವರದಿ ಸಾದರಪಡಿಸಿ ಒಂದು ವಾರ ನಡೆದ ಕಮ್ಮಟದಲ್ಲಿ ೧೦೭ ಪುರುಷರು ಮತ್ತು ೧೦೫ ಮಹಿಳೆಯರು ಸೇರಿದಂತೆ ಒಟ್ಟು ೨೧೨ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ ಎಂದರು.
ಬ್ರಹ್ಮಾವರದ ತಿಮ್ಮಪ್ಪ ಕರ್ಕೇರಾ ಮತ್ತು ಸುಳ್ಯದ ಶ್ರೀಲತಾ ಕಮ್ಮಟದ ಬಗ್ಯೆ ಅಭಿಪ್ರಾಯ, ಅನಿಸಿಕೆ ವ್ಯಕ್ತಪಡಿಸಿದರು.
ಮಾಣಿಲದ ಮೋಹನದಾಸ ಸ್ವಾಮೀಜಿ, ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಇದ್ದರು.
ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ರತ್ನವರ್ಮ ಜೈನ್ ಧನ್ಯವಾದವಿತ್ತರು.
ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.