ಬೆಳ್ತಂಗಡಿ: ಕಳೆದ 14 ವರ್ಷಗಳಿಂದ ನ್ಯಾಯಕ್ಕಾಗಿ ಮೊರೆಯಿಡುತ್ತಿರುವ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟು ನೀಡಿದ ನಿರ್ದೇಶನದಂತೆ ಧಕ್ಷ, ಪ್ರಾಮಾಣಿಕ, ಹಾಗೂ ಯೋಗ್ಯ ಅಧಿಕಾರಿಗಳ ಎಸ್.ಐ.ಟಿ ರಚಿಸಿ ತನಿಖೆ ನಡೆಸಬೇಕಾದ ಸರಕಾರ ತಾನು ರಚಿಸಿದ ಎಸ್.ಐ.ಟಿಯಲ್ಲಿ ಕಳಂಕಿತರನ್ನು ಸೇರಿಸಿ ಮತ್ತೆ ನ್ಯಾಯ ಸಿಗದಂತೆ ಮಾಡಲು ಹುನ್ನಾರ ನಡೆಸಿದೆ ಎಂದು ಜನವಾದಿ ಮಹಿಳಾ ಸಂಘಟನೆ (ಜೆ.ಎಂಎಸ್) ದ.ಕ. ಜಿಲ್ಲಾಧ್ಯಕ್ಷರಾದ ಕಿರಣಪ್ರಭಾ ಅವರು ಆರೋಪಿಸಿದರು.
ಸುಪ್ರೀಂ ಕೋರ್ಟು ನೀಡಿದ ತೀರ್ಪಿನಂತೆ ಸೌಜನ್ಯ ಪ್ರಕರಣದ ಮರು ತನಿಖೆಗೆ ನೇಮಕವಾದ ಎಸ್.ಐ.ಟಿ.ಯಿಂದ ಕಳಂಕಿತರನ್ನು ಕೈಬಿಡಲು ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತಾಡಿದರು. ಸೌಜನ್ಯಳಿಗೆ ನ್ಯಾಯ ಸಿಕ್ಕಿಲ್ಲ ಎಂದು ಮನವರಿಕೆ ಮಾಡಿಕೊಂಡ ಸುಪ್ರೀಂ ಕೋರ್ಟು ಮರು ತನಿಖೆಗೆ ಆದೇಶಿಸಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ ಎಂದವರು ಹೇಳಿದರು.
ಜೆ.ಎಂ.ಎಸ್ ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಾತಾಡುತ್ತಾ 2012 ರಲ್ಲಿ ಸೌಜನ್ಯ ಪ್ರಕರಣ ನಡೆದಾಗಿನಿಂದ ನಿರಂತರ ಹೋರಾಟದ ಕಣದಲ್ಲಿದ್ದ ಜೆ.ಎಂಎಸ್ ಗೆ ಇಂದು ಸುಪ್ರೀಂ ಕೋರ್ಟು ನೀಡಿದ ತೀರ್ಪಿನಿಂದ ಮತ್ತೆ ನ್ಯಾಯದ ಬಯಕೆ ಚಿಗುರಿದೆ ಎಂದರು. ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವುದರ ಜೊತೆಗೆ ಪದ್ಮಲತ, ಮೊದಲಾದ ನೂರಾರು ಅಸಹಜ ಸಾವುಗಳಿಗೆ, ಪತ್ತೆಯಾಗದ ಪ್ರಕರಣಗಳಿಗೆ ನ್ಯಾಯ ಸಿಗುವಂತಾಗಲಿ ಎಂದವರು ಆಶಿಸಿದರು. ಸುಪ್ರೀಂ ಕೊರ್ಟಿನಂತೆ ಮರು ತನಿಖೆ ಮಾಡಬೇಕಾದ ಎಸ್.ಐ.ಟಿ. ತನಿಖಾ ತಂಡ ರಚಿಸುವಾಗ ಯೋಗ್ಯರನ್ನು ಆಯ್ಕೆ ಮಾಡಬೇಕೇ ವಿನ ಅಪ್ರಮಾಣಿಕೆತೆ, ಹಲವು ಆರೋಪಗಳಿಂದ ಕೂಡಿದ ಅದಿಕಾರಗಳನ್ನು ಆಯ್ಕೆ ಮಾಡಬಾರದು ಎಂದವರು ಹೇಳಿದರು.
ಈ ಸಂದರ್ಭ ಮಾತಾಡಿದ ರೈತ ನಾಯಕ ಶ್ಯಾಮ ರಾಜ್ ಅವರು “ಒಂದೋ ಯೋಗ್ಯ ಪ್ರಮಾಣಿಕ ಅಧಿಕಾರಿಗಳ ಆಯ್ಕೆ ಮಾಡುವ ಮೂಲಕ ಸೌಜನ್ಯಳಿಗೆ ನ್ಯಾ ಕೊಡಿಸಲು ಸರಕಾರ ಈ ಅವಕಾಶವನ್ನು ಬಳಸಿಕೊಳ್ಳಲಿ ಅಥವಾ ಧಕ್ಷ, ಯೋಗ್ಯ, ಪ್ರಮಾಣಿಕ ಅಧಿಕಾರಿಗಳೇ ನಮ್ಮ ಸರಕಾರದಲ್ಲಿ ಇಲ್ಲ ಎಂದು ಮುಖ್ಯಮಂತ್ರಿಗಳು ಘೋಷಿಸಲಿ” ಎಂದು ಸವಾಲು ಹಾಕಿದರು.
ಜಯಶ್ರೀ ಸ್ವಾಗತಿಸಿ ಸೌಜನ್ಯ ಹೋರಾಟದ ಕ್ರಾಂತಿಗೀತೆ ಹಾಡಿದರು. ಹೋರಾಟದ ಹೋರಾಟದ ನಾಯಕತ್ವದಲ್ಲಿ ಜೆ.ಎಂಎಸ್ ಮುಖಂಡರಾದ ಯೋಗಿತ, ಪ್ರಮೋದಿನಿ, ಅಸುಂತ, ರೋಹಿಣಿ, ಮಮತ, ಕುಮಾರಿ, ಅಶ್ವಿತ, ಕುಸುಮಾವತಿ, ಸಿಐಟಿಯು ದ.ಕ. ಜಿಲ್ಲಾಧ್ಯಕ್ಷರಾದ ಬಿ.ಎಂ.ಭಟ್, ಕಾರ್ಮಿಕ ಮುಖಂಡರಾದ ಧನಂಜಯ, ಸುಕುಮಾರ್, ರಾಮಚಂದ್ರ, ಅಪ್ಸರಾಲಿಯ ಮೊದಲಾದವರು ಇದ್ದರು. ಜೆ.ಎಂಎಸ್ ತಾಲೂಕು ಕಾರ್ಯದರ್ಶಿ ವಿನೋದ ಮನವಿ ಓದಿದರು. ಪ್ರತಿಭಟನಾಕಾರರು ಸರಕಾರಕ್ಕೆ ಮನವಿ ಸಲ್ಲಿಸಿದರು. ಪುಷ್ಪ ವಂದಿಸಿದರು.




