ಬೆಳ್ತಂಗಡಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸರ್ವೋಚ್ಚ ನ್ಯಾಯಾಲಯಕ್ಕೆ ಸೌಜನ್ಯಳ ತಾಯಿ ಕುಸುಮಾವತಿ ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ, ಪ್ರಕರಣದ ಮರುತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ (SIT)ದ ಬಗ್ಗೆ ತಮಗೆ ಅಸಮಾಧಾನವಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಕತಾಣದಲ್ಲಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಕುಸುಮಾವತಿ, “ನನ್ನ ಮಗಳು, ಧರ್ಮಸ್ಥಳ ಸೌಜನ್ಯಳಿಗಾದ ದುರಂತದ ಮರುತನಿಖೆಗೆ ಆದೇಶಿಸಿರುವ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ನಾವು ಎಂದಿಗೂ ಆಭಾರಿಯಾಗಿರುತ್ತೇವೆ” ಎಂದು ಹೇಳಿದ್ದಾರೆ.
“ಮರುತನಿಖೆಗಾಗಿ ರಾಜ್ಯ ಸರ್ಕಾರವು ರಚಿಸಿರುವ ವಿಶೇಷ ತನಿಖಾ ದಳದ ಬಗ್ಗೆ ನಮಗೆ ಅಸಮಾಧಾನವಿದೆ” ಎಂದು ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸೌಜನ್ಯ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿರುವ SIT ಕುರಿತು ಸೌಜನ್ಯ ಕುಟುಂಬದ ಮೊದಲ ಅಧಿಕೃತ ಹೇಳಿಕೆ ಇದಾಗಿದೆ.
ತನಿಖಾ ತಂಡದ ಕುರಿತು ಕುಸುಮವತಿಯವರಿಗೆ ಯಾವ ಕಾರಣಕ್ಕೆ ಅಸಮಾಧಾನ ಇದೆ ಎಂಬುದನ್ನು ತಿಳಿಸಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೆ ತಿಳಿದು ಬರಬೇಕಾಗಿದೆ.









