ಬೆಳ್ತಂಗಡಿ: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಕುರಿತು ಕೇಂದ್ರ ಪರಿಸರ ಸಚಿವಾಲಯ ಜು.27 ರಂದು ಹೊರಡಿಸಿರುವ ಕರಡು ಅಧಿಸೂಚನೆಯಲ್ಲಿ ಬೆಳ್ತಂಗಡಿ ತಾಲೂಕಿನ 16 ಗ್ರಾಮ ಪಂಚಾಯತ್‌ಗಳ 18 ಗ್ರಾಮಗಳು ಸೇರಿವೆ.ಇದು ಅಂತಿಮಗೊಂಡರೆ ಭೂ ಬಳಕೆ, ಕೃಷಿ, ವಸತಿ, ಕೈಗಾರಿಕೆ ಮೇಲೆ ಪರಿಣಾಮ ಬೀರಲಿದೆ ಎಂಬ ಭಯ ಸ್ಥಳೀಯ ಜನರನ್ನು ಕಾಡುತ್ತಿದ್ದು ಗ್ರಾಮಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಕಸ್ತೂರಿ ರಂಗನ್ ವರದಿ ಬಗ್ಗೆ ಗ್ರಾಮಸ್ಥರಿಗೆ ಸಮಗ್ರವಾದ ಮಾಹಿತಿ ನೀಡಿ ಆಕ್ಷೇಪಣೆ, ಸಲಹೆ, ಅಭಿಪ್ರಾಯ ಸಂಗ್ರಹಿಸಲು ಸೆ.25ರೊಳಗೆ ವಿಶೇಷ ಗ್ರಾಮಸಭೆ ನಡೆಸುವಂತೆ ಸರಕಾರ ಸೂಚಿಸಿದ್ದು ಅದರಂತೆ ಬೆಳ್ತಂಗಡಿ ತಾಲೂಕು ಪಂಚಾಯತು ಕಾರ್ಯಾಲಯದಿಂದ ವಿಶೇಷ ಗ್ರಾಮಸಭೆಗಳ ದಿನಾಂಕಗಳನ್ನು ನಿಗಧಿ ಮಾಡಿದೆ.
ಅದರಂತೆ ಸೆ.18 ರಂದು ಕುತ್ಲೂರು, ಸೆ.19 ನಾವರ, ಸೆ 21 ರಂದು ಚಾರ್ಮಾಡಿ ಹಾಗೂ ಕಳೆಂಜ, ಸೆ. 23 ನಾರಾವಿ, ರೆಖ್ಯ, ಸೆ 24 ರಂದು ಮಲವಂತಿಗೆ, ನಡ, ನಾಲ್ಕೂರು, ಪುದುವೆಟ್ಟು, ಸವಣಾಲು ಶಿಶಿಲ ಸೆ 25 ರಂದು ಸುಲ್ಕೇರಿ, ನಾವೂರು,ನೆರಿಯ, ಶಿಬಾಜೆ, ಸುಲ್ಕೇರಿ ಮೊಗ್ರು, ಶಿರ್ಲಾಲು ಗ್ರಾಮಗಳ ಗ್ರಾಮಸಭೆ ನಡೆಯಲಿದೆ.
ಗ್ರಾಮಸಭೆಯ ಮಾಹಿತಿಯನ್ನು ಪಂಚತಂತ್ರ 2.0ನಲ್ಲಿ ದಾಖಲಿಸಿ ಕಸ್ತೂರಿ ರಂಗನ್ ವರದಿಯ ಕರಡು ಪ್ರತಿ ಬಗ್ಗೆ ಚರ್ಚಿಸಿ, ಬಂದ ಅಭಿಪ್ರಾಯಗಳನ್ನು ನಡಾವಳಿಯಲ್ಲಿ ದಾಖಲಿಸಬೇಕು ಎಂದು ತಾಲೂಕು ಪಂಚಾಯತ್ ನಿಂದ ಗ್ರಾಮ ಪಂಚಾಯತು ಗಳಿಗೆ ಸೂಚನೆ ನೀಡಲಾಗಿದೆ.
