Home ಅಪರಾಧ ಲೋಕ ಉಪ್ಪಿನಂಗಡಿ: ಹೆದ್ದಾರಿ ಬದಿಯ ಟ್ಯಾಂಕರ್‌ ನಿಂದ ಡೀಸೆಲ್ ಕಳವು ಆರೋಪ; ಇಬ್ಬರ ಬಂಧನ

ಉಪ್ಪಿನಂಗಡಿ: ಹೆದ್ದಾರಿ ಬದಿಯ ಟ್ಯಾಂಕರ್‌ ನಿಂದ ಡೀಸೆಲ್ ಕಳವು ಆರೋಪ; ಇಬ್ಬರ ಬಂಧನ

1
0


ಉಪ್ಪಿನಂಗಡಿ: ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳ ಡೀಸೆಲ್ ಟ್ಯಾಂಕ್‌ನಿಂದ ಡೀಸೆಲ್ ಕಳವು ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಸೆ.3ರಂದು ರಾತ್ರಿ ಉಪ್ಪಿನಂಗಡಿ ಠಾಣೆಯ ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಕಡಬ ಕೌಕ್ರಾಡಿ ಗ್ರಾಮದ ಅಲಂಪಾಡಿ ಕ್ರಾಸ್ ಬಳಿ ಮಂಗಳೂರು–ಬೆಂಗಳೂರು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ಸಮೀಪ ಬೊಲೆರೋ ಪಿಕಪ್ ವಾಹನ ಹಾಗೂ ಮೂವರು ಅನುಮಾನಾಸ್ಪದವಾಗಿ ನಿಂತಿರುವುದು ಕಂಡುಬಂದಿದೆ. ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದವರ ಪೈಕಿ ಇಬ್ಬರನ್ನು ಪೊಲೀಸರು ಹಿಡಿದು ವಿಚಾರಣೆ ನಡೆಸಿದ್ದಾರೆ.
ಬಂಧಿತರನ್ನು ಮಂಡ್ಯ ಜಿಲ್ಲೆಯ ಮದ್ದೂರು ನಿವಾಸಿಗಳಾದ ಜೈಮುತ್ತಾ (23) ಹಾಗೂ ಮುತ್ತು (28) ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳ ಡೀಸೆಲ್ ಟ್ಯಾಂಕ್‌ಗಳಿಂದ ಡೀಸೆಲ್ ಕಳವು ಮಾಡುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳ ಪರಿಶೀಲನೆ ವೇಳೆ ಕ್ಯಾನ್‌ನಲ್ಲಿ ತುಂಬಿಸಲಾಗಿದ್ದ ಸುಮಾರು 20 ಲೀಟರ್ ಡೀಸೆಲ್, ಖಾಲಿ ಕ್ಯಾನ್‌ಗಳು, ಡೀಸೆಲ್ ಕಳವಿಗೆ ಬಳಸಿದ್ದ ರಬ್ಬರ್ ಪೈಪ್ ಸೇರಿದಂತೆ ಇತರೆ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಬೊಲೆರೋ ಪಿಕಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 118/2026, ಕಲಂ 35(1)(ಡಿ) ಬಿಎನ್‌ಎಸ್‌ಎಸ್ 2023 ಹಾಗೂ ಕಲಂ 303(2) ಬಿಎನ್‌ಎಸ್ 2023ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

LEAVE A REPLY

Please enter your comment!
Please enter your name here