Home ಸ್ಥಳೀಯ ಸಮಾಚಾರ ಬೆಳಾಲು ಮುಖ್ಯ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ; ಬೈಕ್ ಸವಾರ ಅಪಾಯದಿಂದ ಪಾರು, ಅರಣ್ಯ ಇಲಾಖೆಯಿಂದ‌ ಕಾರ್ಯಾಚರಣೆ

ಬೆಳಾಲು ಮುಖ್ಯ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ; ಬೈಕ್ ಸವಾರ ಅಪಾಯದಿಂದ ಪಾರು, ಅರಣ್ಯ ಇಲಾಖೆಯಿಂದ‌ ಕಾರ್ಯಾಚರಣೆ

2
0

ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ಮಿನಂದೇಲು ಬಸ್ ನಿಲ್ದಾಣದ ಬಳಿ ಗುರುವಾರ ರಾತ್ರಿ ಕಾಡಾನೆಯೊಂದು ರಸ್ತೆ ಮಧ್ಯೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಸೆ. 3ರಂದು ರಾತ್ರಿ ಸುಮಾರು 10.30ರ ವೇಳೆಗೆ ಉಜಿರೆ-ಬೆಳಾಲು-ಬಂದಾರು ಮುಖ್ಯರಸ್ತೆಯಲ್ಲಿ ಬೈಕ್‌ ನಲ್ಲಿ ಸಂಚರಿಸುತ್ತಿದ್ದ ಸವಾರನಿಗೆ ಮಿನಂದೇಲು ಗ್ರಾಮದ ಡಿ.ಪಿ. ಸ್ಪೋರ್ಟ್ಸ್ ಕ್ಲಬ್ ಮೈದಾನದ ಪಕ್ಕದಲ್ಲಿರುವ ಬಸ್ ನಿಲ್ದಾಣದ ಸಮೀಪ ಏಕಾಏಕಿ ಕಾಡಾನೆ ಎದುರಾಗಿದೆ. ರಸ್ತೆ ಮಧ್ಯದಲ್ಲೇ ಆನೆ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಬೈಕ್ ಸವಾರ ಯಾವುದೇ ಅಪಾಯಕ್ಕೆ ಸಿಲುಕದೆ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯರ ಮಾಹಿತಿ ಪ್ರಕಾರ, ಕಾಡಾನೆ ಮಂಜನೊಟ್ಟು ಪ್ರದೇಶದಿಂದ ಭಂಡಾರಿ ಮಜಲು ಮೂಲಕ ಸಂಚರಿಸಿ, ರಾತ್ರಿ ಸುಮಾರು 1.35ರ ವೇಳೆಗೆ ಮುಂಡೇತ್ಯಾರು ದಾಟಿ ಕೆಳಗಿನ ಬೆಳಾಲು ಭಾಗದತ್ತ ತೆರಳಿದೆ. ಆನೆಯ ಚಲನವಲನದಿಂದ ಈ ಭಾಗದ ಜನರಲ್ಲಿ ಆತಂಕ ಹೆಚ್ಚಾಗಿದೆ.

ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆಯ ಚಲನವಲನದ ಬಗ್ಗೆ ನಿಗಾ ವಹಿಸಲಾಗಿದ್ದು, ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಇದಕ್ಕೂ ಮೊದಲು ಧರ್ಮಸ್ಥಳ ಸಮೀಪದ ಪುದುವೆಟ್ಟು ಕ್ರಾಸ್ ಬಳಿ ಹೆದ್ದಾರಿ ಬದಿಯಲ್ಲಿ ಮತ್ತೊಂದು ಕಾಡಾನೆ ಕಾಣಿಸಿಕೊಂಡಿತ್ತು. ನಿರಂತರವಾಗಿ ಜನವಸತಿ ಹಾಗೂ ಪ್ರಮುಖ ರಸ್ತೆಗಳ ಸಮೀಪ ಕಾಡಾನೆಗಳ ಓಡಾಟ ಕಂಡುಬರುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here