ಬೆಳ್ತಂಗಡಿ; ತಾಲೂಕಿನ ನಿಡ್ಲೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು ಕೃಷಿಕರು ಆತಂಕದಲ್ಲಿದ್ದಾರೆ.
ಇಲ್ಲಿನ ನೆಡಿಲು ಎಂಬಲ್ಲಿಯ ನಾರಾಯಣಗೌಡ ರವರ ತೋಟಕ್ಕೆ ನಿಡ್ಲೆ ಮೀಸಲು ಅರಣ್ಯದಿಂದ ಕಾಡಾನೆಗಳು ಬಂದಿದೆ. ತೋಟಕ್ಕೆ ನುಗ್ಗಿ ಬಾಳೆ ತೆಂಗಿನ ಮರಗಳನ್ನು ತಿಂದು ತುಳಿದು ನಾಶಪಡಿಸಿದೆ.
ತೋಟದಿಂದ ಕಾಡಾನೆ ನಿಡ್ಲೆ ಮೀಸಲು ಅರಣ್ಯಕ್ಕೆ ಹೋಗಿರುವುದಾಗಿ ಅನುಮಾನಿಸಲಾಗಿದೆ. ಕಳೆದ ಒಂದು ವಾರದಿಂದ ಇದೇ ಪರಿಸರದಲ್ಲಿ ಕಾಡಾನೆಗಳು ಓಡಾಟ ನಡೆಸುತ್ತಿದ್ದು ಪ್ರತಿದಿನ ಒಂದಲ್ಲ ಒಂದು ತೋಟಕ್ಕೆ ನುಗ್ಗುತ್ತಿದೆ. ಆನೆದಾಳಿಯ ಬಗ್ಗೆ ಮಾಹಿತಿ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಂದಾರಿನಲ್ಲಿ ಕಾಡಾನೆ ಹಾವಳಿ; ರಾತ್ರಿಯ ವೇಳೆ ಬಂದಾರು ಗ್ರಾಮದ ಓಟೆಚಾರು ಎಂಬಲ್ಲಿ ಕಾಡಾನೆಗಳು ತೋಟಗಳಿಗೆ ನುಗ್ಗಿದೆ ಇಲ್ಲಿನ ನಿವಾಸಿಗಳಾದ ಮೋನ ಪೂಜಾರಿ ಹಾಗೂ ಅಬ್ದುಲ್ ರಜಾಕ್ ಅವರ ತೋಟಗಳಲ್ಲಿ ತೆಂಗಿನ ಗಿಡಗಳನ್ನು ನಾಶಪಡಿಸಿದೆ.
