ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ತೋಟತ್ತಾಡಿ ಗ್ರಾಮದ ಬೆಂದ್ರಾಳದಲ್ಲಿ ಬುಧವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ದಿನಸಿ ಅಂಗಡಿಯೊಂದು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಬೆಂದ್ರಾಳ ನಿವಾಸಿ ಶರೀಫ್ ಅವರ ಮಾಲಕತ್ವದ ದಿನಸಿ ಅಂಗಡಿಯಲ್ಲಿ ತಡರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಅಂಗಡಿ ಹಾಗೂ ಕಟ್ಟಡವನ್ನು ಆವರಿಸಿದೆ. ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ, ಪರಸ್ಪರ ಸಹಕಾರದೊಂದಿಗೆ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಇದರಿಂದ ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲಾಯಿತು.
ಆದರೆ ಬೆಂಕಿಯ ತೀವ್ರತೆಗೆ ಅಂಗಡಿಯಲ್ಲಿದ್ದ ಸಂಪೂರ್ಣ ದಿನಸಿ ಸಾಮಗ್ರಿಗಳು, ಕಟ್ಟಡ ಹಾಗೂ ಸುಮಾರು 1 ಲಕ್ಷ ರೂ. ನಗದು ಬೆಂಕಿಗಾಹುತಿಯಾಗಿವೆ. ಘಟನೆಯಿಂದ 5 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಘಟನೆಯ ಮಾಹಿತಿ ತಿಳಿದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾರ್ಟ್ ಸರ್ಕ್ಯೂಟ್ ನಿಂದಲೇ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಘಟನೆಯ ಕುರಿತು ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ.
