ಬಂಟ್ವಾಳ: ಹಾಡಹಗಲೇ ನಿರ್ಜನ ಪ್ರದೇಶದಲ್ಲಿ ಬೈಕ್ ಸವಾರನನ್ನು
ಅಡ್ಡಗಟ್ಟಿ ನಾಲ್ವರು ಲಕ್ಷಾಂತರ ರೂ. ದರೋಡೆ ನಡೆಸಿದ ಘಟನೆ ಆ.20ರ ಗುರುವಾರ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡ ಎಂಬಲ್ಲಿ ಸಂಭವಿಸಿದೆ.
ಸುರತ್ಕಲ್ ನಿವಾಸಿ ಮಯ್ಯದಿ ಎಂಬವರು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಬೈಕ್ ಸವಾರನನ್ನು ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿ ಕೈಯಲ್ಲಿದ್ದ ಹಣವನ್ನು ದರೋಡೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ದರೋಡೆಗೊಳಗಾದ ಬೈಕ್ ಸವಾರನ ಬ್ಯಾಗ್‌ನಲ್ಲಿ ಸುಮಾರು 8 ಲಕ್ಷ ರೂ.ಗಳಿಗೂ ಅಧಿಕ ಹಣ ಇತ್ತು ಎನ್ನಲಾಗುತ್ತಿದ್ದು, ಆರೋಪಿಗಳು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿದ ಕೂಡಲೇ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆಯ ನಿಖರ ವಿವರಗಳು ಹಾಗೂ ದರೋಡೆಗೊಳಗಾದ ಹಣದ ಮೊತ್ತ ಪೊಲೀಸ್ ತನಿಖೆಯ ಬಳಿಕವೇ ತಿಳಿದು ಬರಬೇಕಾಗಿದೆ.




