Home ಸ್ಥಳೀಯ ಸಮಾಚಾರ ಸೇವಾ ಭದ್ರತೆ ಮತ್ತು 30,000 ರೂ. ಗೌರವಧನಕ್ಕೆ ಒತ್ತಾಯ, ಬೆಂಗಳೂರಿನಲ್ಲಿ ಅತಿಥಿ ಉಪನ್ಯಾಸಕರ ಸಮಾವೇಶ‌

ಸೇವಾ ಭದ್ರತೆ ಮತ್ತು 30,000 ರೂ. ಗೌರವಧನಕ್ಕೆ ಒತ್ತಾಯ, ಬೆಂಗಳೂರಿನಲ್ಲಿ ಅತಿಥಿ ಉಪನ್ಯಾಸಕರ ಸಮಾವೇಶ‌

4
0

ಬೆಂಗಳೂರು: “ಅತಿಥಿ” ಎಂಬ ಹಣೆಪಟ್ಟಿ ಕಟ್ಟಿ ಅತಿಥಿ ಉಪನ್ಯಾಸಕರನ್ನು ಶೋಷಿಸುತ್ತಿರುವ ಸರ್ಕಾರದ ಧೋರಣೆ ನಾಚಿಕೆಗೇಡಿನ ಸಂಗತಿಯಾಗಿದೆ. ಹೆಸರಿಗೆ ಮಾತ್ರ “ಅತಿಥಿ” ಆದರೆ ಕೆಲಸ ಮಾತ್ರ ಖಾಯಂ ಉಪನ್ಯಾಸಕರಿಗಿಂತಲೂ ಹೆಚ್ಚು ಮಾಡಿಸುತ್ತಿದ್ದಾರೆ. ಆದರೂ ಮಾಸಿಕ ಕೇವಲ 14,000 ರೂ. ಗೌರವಧನ ನೀಡುತ್ತಿರುವುದು ಖಂಡನೀಯ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್‌.ಎನ್‌. ಮುಕುಂದರಾಜು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘವು ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶವು ಇಂದು ಬೆಂಗಳೂರಿನ ಗುಂಡುರಾವ್ ಸಭಾಂಗಣದಲ್ಲಿ ನಡೆಯಿತು.

ಸಮಾವೇಶದಲ್ಲಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಎಂ. ಮುರಿಗೆಪ್ಪ ಅವರು, “10 ರಿಂದ 15 ವರ್ಷಗಳಿಂದ ಗುಣಮಟ್ಟದ ಬೋಧನೆ ಮಾಡುತ್ತಿರುವ ಅನುಭವಿ ಅತಿಥಿ ಉಪನ್ಯಾಸಕರಿಗೆ ಸರ್ಕಾರ ಕೂಡಲೇ ಸೇವಾ ಭದ್ರತೆ ನೀಡಬೇಕು. ಸೇವಾ ಹಿರಿತನ ಪರಿಗಣಿಸದೆ ಕೇವಲ ಮೆರಿಟ್ ಹೆಸರಿನಲ್ಲಿ ಕೈಬಿಡುತ್ತಿರುವುದು ಅನ್ಯಾಯ” ಎಂದು ಹೇಳಿದರು.

ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಶ್ರೀ. ಎನ್. ನಿಂಗೇಗೌಡ ಅವರು ಮಾತನಾಡಿ, “ರಾಜ್ಯದ ಹಲವು ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರ ಕೊರತೆ ಇದೆ. ಅತಿಥಿ ಉಪನ್ಯಾಸಕರ ಅವಿರತ ಶ್ರಮದಿಂದಾಗಿಯೇ ಪಿಯುಸಿ ಫಲಿತಾಂಶ ಉತ್ತಮಗೊಂಡಿದೆ. ನಾವು ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ” ಎಂದು ತಿಳಿಸಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿ.ಎನ್‌. ರಾಜಶೇಖರ್ ಅವರು, “ಫಲಿತಾಂಶವನ್ನು ಉತ್ತಮಗೊಳಿಸಿದ ಶಿಕ್ಷಕರನ್ನೇ ಸರ್ಕಾರ ಕಡೆಗಣಿಸುತ್ತಿದೆ. ಅತ್ಯಂತ ಕಡಿಮೆ ವೇತನ ನೀಡಿ, ಯಾವುದೇ ಸೇವಾ ಭದ್ರತೆ ಇಲ್ಲದೆ ದುಡಿಸಿಕೊಳ್ಳುತ್ತಿರುವುದು ಖಂಡನೀಯ” ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಪ್ರಸ್ತುತ 6000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಹಲವು ಬಾರಿ ಮನವಿ ನೀಡಿದರೂ ಸರ್ಕಾರ ಸ್ಪಂದಿಸಿಲ್ಲ. ಈಗಲಾದರೂ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಪದ್ಮ ಪ್ರಭ ಇಂದ್ರ ಒತ್ತಾಯಿಸಿದರು. ರಾಜ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭಟ್ ಜಂಟಿ ಕಾರ್ಯದರ್ಶಿ ನಾಗರತ್ನ ,ಹೊರಗುತ್ತಿಗೆ ಸಂಘದ ರಾಜ್ಯಅಧ್ಯಕ್ಷರು ಸುಧಾಕರ್ ಯಾದವ್ ಹಾಗೂ ನೂರಾರು ಜನ ಅತಿಥಿ ಉಪನ್ಯಾಸಕರು ಭಾಗವಹಿಸಿದರು.

LEAVE A REPLY

Please enter your comment!
Please enter your name here