Home ರಾಜಕೀಯ ಸಮಾಚಾರ ಕಟ್ಟಡ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಶಾಸಕ‌ ಹರೀಶ್ ಪೂಂಜ ಅವರಿಗೆ ಬಿ.ಎಂ.ಎಸ್  ಮನವಿ

ಕಟ್ಟಡ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಶಾಸಕ‌ ಹರೀಶ್ ಪೂಂಜ ಅವರಿಗೆ ಬಿ.ಎಂ.ಎಸ್  ಮನವಿ

2
0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಸಮಸ್ಯೆಗಳು ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿನ ಅವ್ಯವಸ್ಥೆಗಳ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತಿ, ಸರ್ಕಾರದ ಗಮನ ಸೆಳೆದು ಶೀಘ್ರ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ಕಾಮಗಾರಿ ಮಜ್ದೂರ್ ಸಂಘ (ಬಿ.ಎಂ.ಎಸ್.) ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಮಾನ್ಯ ಬೆಳ್ತಂಗಡಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನ ಸಾವಿರಾರು ಕಟ್ಟಡ ಕಾರ್ಮಿಕರು ಮನೆ, ಕಟ್ಟಡ, ರಸ್ತೆ, ಸೇತುವೆ, ಶಾಲೆ, ಆಸ್ಪತ್ರೆ ಸೇರಿದಂತೆ ಸಮಾಜದ ಅಭಿವೃದ್ಧಿಗೆ ತಮ್ಮ ಶ್ರಮದ ಮೂಲಕ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಆದರೆ ಕಾರ್ಮಿಕರಿಗಾಗಿ ಇರುವ ಕಲ್ಯಾಣ ಮಂಡಳಿಯ ವಿವಿಧ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪದೆ, ವಿದ್ಯಾರ್ಥಿವೇತನ, ವೈದ್ಯಕೀಯ ನೆರವು, ವಸತಿ, ಅಪಘಾತ ಪರಿಹಾರ ಸೇರಿದಂತೆ ಹಲವು ಸಮಸ್ಯೆಗಳನ್ನು ಕಾರ್ಮಿಕರು ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಲ್ಯಾಣ ಮಂಡಳಿಯ ಹಣವನ್ನು ಕಾರ್ಮಿಕರ ನೇರ ಸಾಮಾಜಿಕ ಭದ್ರತೆಗೆ ಬಳಸುವುದು, ಮಂಡಳಿಯ ಅನಗತ್ಯ ಯೋಜನೆಗಳು ಮತ್ತು ಟೆಂಡರ್‌ಗಳನ್ನು ಪರಿಶೀಲಿಸುವುದು, ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು, ಕೆಂಪುಕಲ್ಲಿನ ದರ ನಿಯಂತ್ರಿಸುವುದು, ಕಾರ್ಮಿಕರು ಹಾಗೂ ಅವಲಂಬಿತರಿಗೆ ಸರಳ ಮತ್ತು Cashless ವೈದ್ಯಕೀಯ ಸೌಲಭ್ಯ ಕಲ್ಪಿಸುವುದು, ಬಾಕಿ ಇರುವ ವೈದ್ಯಕೀಯ ಮರುಪಾವತಿಗಳನ್ನು ಬಿಡುಗಡೆ ಮಾಡುವುದು, ನಿವೇಶನ ಮತ್ತು ಮನೆ ನಿರ್ಮಾಣಕ್ಕೆ ಸಹಾಯಧನ ನೀಡುವುದು ಹಾಗೂ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನದ ಮೊತ್ತ ಹೆಚ್ಚಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಅದೇ ರೀತಿ ಸ್ಥಳೀಯ ಕಟ್ಟಡ ಕಾರ್ಮಿಕರ ಉದ್ಯೋಗ ರಕ್ಷಣೆ, 60 ವರ್ಷ ನಂತರವೂ ಸಾಮಾಜಿಕ ಭದ್ರತೆ ಮತ್ತು ವೈದ್ಯಕೀಯ ನೆರವು ಮುಂದುವರಿಸುವುದು, ತಡೆಹಿಡಿದಿರುವ ವಿದ್ಯಾರ್ಥಿವೇತನಗಳನ್ನು ಸ್ಥಳ ಪರಿಶೀಲನೆಯ ಮೂಲಕ ಅರ್ಹ ಫಲಾನುಭವಿಗಳಿಗೆ ಬಿಡುಗಡೆ ಮಾಡುವುದು, ಶಾಶ್ವತ ಅಂಗವೈಕಲ್ಯ ಹೊಂದಿದ ಕಾರ್ಮಿಕರಿಗೆ ಕನಿಷ್ಠ ₹10 ಲಕ್ಷ ಪರಿಹಾರ ಹಾಗೂ ಮಾಸಿಕ ₹10,000 ಪಿಂಚಣಿ ನೀಡುವುದು, ಅನಾರೋಗ್ಯ ಅಥವಾ ಅಪಘಾತದ ಸಂದರ್ಭದಲ್ಲಿ ಕುಟುಂಬಗಳಿಗೆ ತಾತ್ಕಾಲಿಕ ಜೀವನ ನಿರ್ವಹಣಾ ಸಹಾಯಧನ ನೀಡುವುದು, ಮಹಿಳಾ ಕಾರ್ಮಿಕರಿಗೆ ಹೆರಿಗೆ ಸಹಾಯಧನ ಹೆಚ್ಚಿಸುವುದು ಹಾಗೂ ಕಾರ್ಮಿಕರ ಮಕ್ಕಳ ಪ್ರತಿಭಾ ಪುರಸ್ಕಾರವನ್ನು ಪುನರಾರಂಭಿಸುವಂತೆ ಒತ್ತಾಯಿಸಲಾಗಿದೆ.

“ಇವು ಕೇವಲ ಬೇಡಿಕೆಗಳಲ್ಲ, ಪ್ರತಿದಿನ ದುಡಿಯುವ ಕಟ್ಟಡ ಕಾರ್ಮಿಕರ ಬದುಕಿನ ಸಮಸ್ಯೆಗಳು. ಇತರರ ಮನೆ ಕಟ್ಟುವ ಕಾರ್ಮಿಕನಿಗೆ ಸ್ವಂತ ಮನೆ ಇಲ್ಲದ ಪರಿಸ್ಥಿತಿ ಇದೆ. ಮಕ್ಕಳ ಭವಿಷ್ಯಕ್ಕಾಗಿ ದುಡಿಯುವ ಕಾರ್ಮಿಕರು ವಿದ್ಯಾರ್ಥಿವೇತನಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಅಪಘಾತ ಅಥವಾ ಅನಾರೋಗ್ಯದ ಸಂದರ್ಭದಲ್ಲಿ ಕುಟುಂಬದ ಜೀವನವೇ ಸಂಕಷ್ಟಕ್ಕೆ ಸಿಲುಕುತ್ತದೆ” ಎಂದು ಸಂಘದ ಪ್ರಮುಖರು ಗಮನ ಸೆಳೆದರು.

ಈ ಎಲ್ಲಾ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ ಹಾಗೂ ಚರ್ಚೆಯ ಮೂಲಕ ಸರ್ಕಾರದ ಗಮನಕ್ಕೆ ತಂದು, ಸಂಬಂಧಪಟ್ಟ ಸಚಿವರು ಮತ್ತು ಇಲಾಖೆಯಿಂದ ಸ್ಪಷ್ಟ ಉತ್ತರ ಹಾಗೂ ಕಾಲಮಿತಿಯೊಳಗೆ ಪರಿಹಾರ ದೊರಕಿಸುವಂತೆ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿ.ಎಂ.ಎಸ್. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು., ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್, ಬಿ.ಎಂ.ಎಸ್. ಬೆಳ್ತಂಗಡಿ ತಾಲೂಕು ಅಧ್ಯಕ್ಷ ಉದಯ ಬಿ.ಕೆ., ಕಟ್ಟಡ ನಿರ್ಮಾಣ ಮತ್ತು ಇತರೆ ಕಾಮಗಾರಿ ಮಜ್ದೂರು ಸಂಘ ರಾಜ್ಯ ಕಾರ್ಯದರ್ಶಿ ಕುಮಾರ್ ನಾಥ್, ತಾಲೂಕು ಸಂಯೋಜಕ ಶಾಂತಪ್ಪ, ಪ್ರಮುಖರಾದ ಉದಯ ಆಚಾರ್ಯ, ಉದಯ ಕುಲಾಲ್ ಹಾಗೂ ಉಮೇಶ್ ಉಜಿರೆ ಉಪಸ್ಥಿತರಿದ್ದರು.

ಬಿ.ಎಂ.ಎಸ್. ಬೆಳ್ತಂಗಡಿ ತಾಲೂಕು ಸಮಿತಿಯು, ತಾಲೂಕಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಶೀಘ್ರ ಸ್ಪಂದಿಸಿ, ಕಲ್ಯಾಣ ಮಂಡಳಿಯ ಸೌಲಭ್ಯಗಳು ಅರ್ಹ ಕಾರ್ಮಿಕರಿಗೆ ನೇರವಾಗಿ ಮತ್ತು ಸರಳವಾಗಿ ತಲುಪುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

LEAVE A REPLY

Please enter your comment!
Please enter your name here