
ಧರ್ಮಸ್ಥಳ: ಸುಭಾಷ್ ಯಾದವ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಮತ್ತೊಮ್ಮೆ ದಾಖಲೆ ಸಾಧನೆ ಮಾಡಿದ್ದು 2025-26ನೇ ಸಾಲಿನಲ್ಲಿ ರೂ. 2.89 ಕೋಟಿ ನಿವ್ವಳ ಲಾಭಗಳಿಸಿರುವ ಸಂಘವು ಸದಸ್ಯರಿಗೆ ಶೇ.21 ಡಿವಿಡೆಂಟ್ ಘೋಷಿಸಿದೆ.
ಆ.14 ರಂದು ಸಂಘದ ಸಾಧನಾ ಕಟ್ಟಡದ ಅಟಲ್ ಜೀ ಸಭಾ ಭವನದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಈ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಲಾಯಿತು. ಸಂಘದ ಅಧ್ಯಕ್ಷ ಪ್ರೀತಮ್ ಡಿ. ಅವರು ಅಧ್ಯಕ್ಷತೆ ವಹಿಸಿದ್ದರು.
100 ಕೋಟಿ ಠೇವಣಿ; ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಪ್ರೀತಮ್ ಡಿ. ಅವರು, “ಸಂಸ್ಥೆಯ ಮೇಲೆ ಸದಸ್ಯರು ಇಟ್ಟಿರುವ ಅವಿಚ್ಛಿನ್ನ ವಿಶ್ವಾಸ ಮತ್ತು ನಂಬಿಕೆಯ ಫಲವಾಗಿ ನಮ್ಮ ಠೇವಣಿ 100 ಕೋಟಿ ರೂ.ವನ್ನೂ ಮೀರಿದೆ. ಇದು ನಮ್ಮೆಲ್ಲರ ಹೆಮ್ಮೆ” ಎಂದು ಹೇಳಿದರು.
ಸಭಾಂಗಣದಲ್ಲಿ ಸ್ಥಳಾವಕಾಶ ಮತ್ತು ಇತರೆ ವ್ಯವಸ್ಥೆಯ ಕೊರತೆಯನ್ನು ಉಲ್ಲೇಖಿಸಿದ ಅವರು, “ಕಾನೂನು ರೀತಿಯಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಮುಂದಿನ ವರ್ಷ ಹೊಸ ಜಾಗವನ್ನು ಖರೀದಿಸಿ ಅಲ್ಲಿಯೇ ಮಹಾಸಭೆ ನಡೆಸುವ ಸಂಕಲ್ಪ ಮಾಡಿದ್ದೇವೆ. ಅಲ್ಲದೆ ಸದಸ್ಯರ ಅನುಕೂಲಕ್ಕಾಗಿ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಸಹ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಘೋಷಿಸಿದರು. ಇದಕ್ಕೆ ಸದಸ್ಯರಿಂದ ಮೆಚ್ಚುಗೆ ವ್ಯಕ್ತವಾಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ಅವರು ವಾರ್ಷಿಕ ವರದಿಯನ್ನು ವಾಚಿಸಿದರು. ಸಂಘದ ಆರ್ಥಿಕ ಸದೃಢತೆ, ಸಾಲ ವಿತರಣೆ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಸದಸ್ಯರು ವಿಸ್ತ್ರತ ಚರ್ಚೆ ನಡೆಸಿದರು.
ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಂಘದ 13 ಮಂದಿ ಹಿರಿಯ ಸದಸ್ಯರನ್ನು, ನಿವೃತ್ತ ಹಿರಿಯ ಆರೋಗ್ಯ ಸಹಾಯಕಿ ವಿಜಯಲಕ್ಷ್ಮೀ ಅವರನ್ನು, ಎಸ್.ಎಸ್.ಎಲ್.ಸಿ.ಯಲ್ಲಿ ವಿಶೇಷ ಸಾಧನೆಗೈದ ಕು. ಮಾಧುರ್ಯ ಅನನ್ಯ ಅವರನ್ನು ಹಾಗೂ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರಾದ ಶಾಂಭವಿ ರೈ, ಉಮಾನಾಥ, ಶೀನ, ಧನಲಕ್ಷ್ಮೀ ಜನಾರ್ದನ, ನೀಲಾಧರ ಶೆಟ್ಟಿ, ಪ್ರಸನ್ನ ಹೆಬ್ಬಾರ್, ಚಂದ್ರಶೇಖರ್, ವಿಕ್ರಂ ಗೌಡ, ತಂಗಚ್ಚನ್ ಹಾಗೂ ಕೇಂದ್ರ ಸಹಕಾರಿ ಬ್ಯಾಂಕ್ ವಲಯ ಮೇಲ್ವಿಚಾರಕ ಸುದರ್ಶನ್ ಕೋಟ್ಯಾನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹಿರಿಯ ಫಿಲ್ಮ ಸಂಗ್ರಹಕ ಎ.ಎಸ್. ಲೋಕೇಶ್ ಶೆಟ್ಟಿ ನಿರೂಪಿಸಿದರು.