ದಕ್ಷಿಣ ಕನ್ನಡ ಅಥವಾ ಕರಾವಳಿ ಜಿಲ್ಲೆಯ ಜನತೆಗೆ ಪ್ರಕೃತಿಯೇ ಮಾತೆ, ಪ್ರಕೃತಿ ದೇವರಿಗೆ ಸಮಾನ. ಇಲ್ಲಿನ ಜನತೆಯ ಆಚಾರ, ವಿಚಾರಗಳು, ಕೃಷಿ, ಸಂಸ್ಕೃತಿ, ಆರಾಧನೆ ಪ್ರಕೃತಿಯೊಂದಿಗೆ ಬೆರೆತು ಹೋಗಿವೆ. ಅದರಲ್ಲೂ ಬೆಳ್ತಂಗಡಿಯ ಜನತೆ ತಲೆ ತಲಾಂತರದಿಂದ ಕಾಡಂಚಿನಲ್ಲಿ ದುಡಿದು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ಕುಗ್ರಾಮದ ಪಟ್ಟಿಯಲ್ಲಿ ತಾಲೂಕಿನ ಕೆಲ ಗ್ರಾಮಗಳೂ ಇದ್ದದ್ದು ಇದಕ್ಕೆ ಸಾಕ್ಷಿ. ಇದೀಗ ಕೇಂದ್ರ ಸರಕಾರ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಆತಂಕದ ವಿಚಾರ. ಇದು ಜಾರಿಯಾದಲ್ಲಿ ಬೆಳ್ತಂಗಡಿಯ ಚಾರ್ಮಾಡಿ, ಕಳಂಜ, ಕೂತ್ಲೂರು, ಮಲವಂತಿಗೆ, ನಡ, ನಾಲ್ಕೂರು, ನಾವೂರು, ನೆರಿಯ, ಪುದುವೆಟ್ಟು, ರೆಖ್ಯಾ, ಸವಣಾಲು, ನಾರಾವಿ, ಶಿಬಾಜೆ, ಶಿಶಿಲ, ಶಿರ್ಲಾಲು, ಸುಲ್ಕೇರಿ ಹಾಗೂ ಸುಲ್ಕೇರಿಮೊಗ್ರು ಸೇರಿದಂತೆ ಹಲವು ಗ್ರಾಮಗಳ ಜನತೆ ತೊಂದರೆ ಅನುಭವಿಸಲಿದ್ದಾರೆ. ಈ ಪ್ರದೇಶಗಳಲ್ಲಿ ಪರಿಶಿಷ್ಟ ವರ್ಗಗಳ ಜನತೆಯೂ ವಾಸಿಸುತ್ತಿದ್ಧಾರೆ ಎಂಬುದು ಉಲ್ಲೇಖನೀಯ ಅಂಶ. ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸದೆ ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿರು ಸರಿಯಲ್ಲ. ದೇಶದ ವಿವಿಧ ಭಾಗಗಳಾದ ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್‌ಘಢ, ಓಡಿಸ್ಸಾ, ನಾಗಾಲ್ಯಾಂಡ್, ಮೆಘಾಲಯ, ಅರುಣಾಚಲ ಪ್ರದೇಶ ಮೊದಲಾದ ರಾಜ್ಯಗಳಲ್ಲೂ ಅರಣ್ಯ ಪ್ರದೇಶಗಳಲ್ಲಿ ಜನತೆ ತಮ್ಮ ಸಂಸ್ಕೃತಿ ಆಚರಣೆಗಳ ಜೊತೆಗೆ ಕೃಷಿ ಮಾಡಿಕೊಂಡು ಬದುಕುತ್ತಿದ್ದಾರೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಅವಕಾಶ ನೀಡಬೇಕಿದೆ. ಪಶ್ಚಿಮ ಘಟ್ಟದ ಮಡಿಲಲ್ಲಿ ತಲೆತಲಾಂತರಗಳಿಂದ ಬದುಕುತ್ತಿರುವವರನ್ನು ಪರಿಸರ ಸಂರಕ್ಷಣೆ ಹೆಸರಿನಲ್ಲಿ ಬೀದಿ ಪಾಲು ಮಾಡಿದರೆ ಅವರು ಏನು ಮಾಡಬೇಕು ಎಂಬುದನ್ನು ಕೇಂದ್ರ ಸರಕಾರ ಚಿಂತಿಸಬೇಕು. ಕೇಂದ್ರ ಸರ್ಕಾರ ಕೂಡಲೇ ಕರಡು ಅಧಿಸೂಚನೆಯನ್ನು ಮರುಪರಿಶೀಲನೆ ನಡೆಸಬೇಕು. ರಾಜ್ಯ ಸರ್ಕಾರದೊಂದಿಗೆ ಸಮಗ್ರ ಚರ್ಚೆ ನಡೆಸಬೇಕು. ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಣೆ ಮಾಡಿ, ಜನರ ಆತಂಕಗಳಿಗೆ ಸ್ಪಷ್ಟ ಉತ್ತರ ನೀಡಬೇಕಿದೆ ಎಂದು ಜಿಲ್ಲಾ ಕೆ.ಡಿ.ಪಿ. ಸದಸ್ಯರಾದ ಸಂತೋಷ್ ಕುಮಾರ್ ಲಾಯಿಲಾ ಒತ್ತಾಯಿಸಿದ್ದಾರೆ.
