
ಬೆಳ್ತಂಗಡಿ: ತಾಲೂಕಿನದ್ಯಾಂತ ಶನಿವಾರ ಹಾಗೂ ಭಾನುವಾರ ಸುರಿದ ಕುಂಭದ್ರೋಣ ಮಳೆಗೆ ತಾಲೂಕಿನ ನಾನಾ ಕಡೆಗಳಲ್ಲಿ ಸಂಪರ್ಕ ಕಡಿತ, ಗುಡ್ಡ ಜರಿತ, ತೋಟ, ಮನೆಗಳು ಜಲಾವೃತಗೊಂಡು ಹಾನಿಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಕೆ.ವಿ. ಸೋಮವಾರ ಬೆಳ್ತಂಗಡಿ
ತಾಲೂಕಿನ ಲಾಯಿಲ ಮತ್ತು ಮುಂಡಾಜೆ ಗ್ರಾಮಗಳಿಗೆ ಭೇಟಿ ನೀಡಿದರು.
ಲಾಯಿಲ ಗ್ರಾಮದ ಪುತ್ರಬೈಲು ಹಾಗೂ ಗುರಿಂಗಾನ ಪರಿಸರದಲ್ಲಿ 17 ಮನೆಗಳಿಗೆ ನದಿ ನೀರು ನುಗ್ಗಿತ್ತು . ಲಾಯಿಲ-ಕಿಲ್ಲೂರು ರಸ್ತೆ ಜಲಾವೃಂತಗೊಂಡು ಸಂಪರ್ಕ ಕಡಿತಗೊಂಡಿತ್ತು. ಈ ಹಿನ್ನಲೆ ಸದ್ರಿ ಸ್ಥಳಕ್ಕೆ ಭೇಟಿ ನೀಡಿದ ಅವರು ಕಿಂಡಿ ಅಣೆಕಟ್ಟನ್ನು ಪರಿಶೀಲನೆ ನಡೆಸಿ ಅಧಿಕಾರಗಳೊಂದಿಗೆ ಮಾಹಿತಿ ಪಡೆದರು.
ದೇಶದಲ್ಲಿ ಅತೀ ಹೆಚ್ಚು ಮಳೆಯಾದ ಎರಡನೇ ಸ್ಥಳ ಮುಂಡಾಜೆ ಗ್ರಾಮಕ್ಕೆ ಭೇಟಿ ನೀಡಿ ಮಳೆಯಿಂದ ಹಾನಿಗೀಡಾದ ಪ್ರದೇಶದ ಮುಂಡಾಜೆ-ಕಲ್ಮಂಜ- ಧರ್ಮಸ್ಥಳ ರಸ್ತೆಯ ಗುಂಡಿ ಹಾಗೂ ಇದೇ ರಸ್ತೆಯ ಪಿಲತ್ತಡ್ಕ ಪ್ರದೇಶದಲ್ಲಿ
ಪರಿಶೀಲನೆ ನಡೆಸಿದರು
ಜಿಲ್ಲಾಧಿಕಾರಿ ಜತೆಯಲ್ಲಿ ಬೆಳ್ತಂಗಡಿ ತಹಸೀಲ್ದಾರ್ ಎಸ್.ಎನ್.ನರಗುಂದ, ಬೆಳ್ತಂಗಡಿ ತಾಲೂಕು ಪಂಚಾಯಿತಿ ಇಒ ಭವನಿಶಂಕರ್, ಬೆಳ್ತಂಗಡಿ ಕಂದಾಯ ನಿರೀಕ್ಷಕ ರಾಜು ಲಮಾಣಿ, ಲಾಯಿಲ ಪಿಡಿಒ ತಾರಾನಾಥ್ ನಾಯ್ಕ್, ಲಾಯಿಲ ಗ್ರಾಮ ಆಡಳಿತಾಧಿಕಾರಿ ರನಿತಾ, ಮುಂಡಾಜೆ ಪಿಡಿಒ ಗಾಯತ್ರಿ
ಹಾಗೂ ಮತ್ತಿತರ ಅಧಿಕಾರಿಗಳು ಭಾಗಿಯಾಗಿದ್ದರು.
ಜಿಲ್ಲಾಧಿಕಾರಿ ಆಗಮನದ ಸುದ್ದಿ ತಿಳಿದ ಲಾಯಿಲ ಹಾಗೂ ಮುಂಡಾಜೆ ಗ್ರಾಮದ ಅನೇಕ ಮಂದಿ ಪ್ರವಾಹ ಪೀಡಿತ ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಹಾಗೂ ಉಂಟಾಗಿರುವ ತೊಂದರೆಗಳನ್ನು ಅವರ ಗಮನಕ್ಕೆ ತರಲು ಬಯಸಿ ಹಾನಿಗೀಡಾದ ಇತರ ಸ್ಥಳಗಳಲ್ಲಿ ಒಟ್ಟಾಗಿದ್ದರು. ಆದರೆ ಜಿಲ್ಲಾಧಿಕಾರಿ ಲಾಯಿಲದಲ್ಲಿ ಕೇವಲ ಎರಡು ಕಿಂಡಿ ಅಣೆಕಟ್ಟು ಹಾಗೂ ಮುಂಡಾಜೆ-ಕಲ್ಮಂಜ-ಧರ್ಮಸ್ಥಳ ರಸ್ತೆಯನ್ನು ಮಾತ್ರ ವೀಕ್ಷಿಸಿ ಹಿಂತಿರುಗಿದರು. ಪ್ರವಾಹದಿಂದ ಹಾನಿಯಾಗಿರುವ ಮನೆಗಳಿಗೆ ಭೇಟಿ ನೀಡಲು ಸಂತ್ರಸ್ತರ ಸಮಸ್ಯೆಗಳನ್ನು ಕೇಳಲು ಮುಂದಾಗಲಿಲ್ಲ ಇದರಿಂದ ಸಂತ್ರಸ್ತರು ತೀವ್ರ ಅಸಮಾಧನಾ ವ್ಯಕ್ತಪಡಿಸುತ್ತಿರುವುದು ಕಂಡುಬಂತು.