
ಬೆಳ್ತಂಗಡಿ : ಶ್ರೀ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ಜು.28 ರಂದು ಖಾಸಗಿ ಸಭಾಭವನದಲ್ಲಿ ನಡೆದ 2025–26ನೇ ಸಾಲಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಗಾರೆಕೆಲಸ, ಬಡಗಿ, ಅಕ್ಕಸಾಲಿಗ, ಕಮ್ಮಾರ, ಎಲೆಕ್ಟ್ರಿಷಿಯನ್ ಹಾಗೂ ಟೈಲರಿಂಗ್ ವೃತ್ತಿಯಲ್ಲಿ ತೊಡಗಿರುವ ಅರ್ಹ ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಹಾಗೂ ಉಚಿತ ಸುಧಾರಿತ ಉಪಕರಣಗಳ ವಿತರಣಾ ಕಾರ್ಯಕ್ರಮದ ವೇದಿಕೆಯ ಬ್ಯಾನರ್‌ನಲ್ಲಿ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಭಾವಚಿತ್ರಗಳನ್ನು ಪ್ರಕಟಿಸದೆ ಕೇವಲ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ಭಾವಚಿತ್ರವನ್ನು ಮಾತ್ರ ಅಳವಡಿಸಿರುವ ಕುರಿತು ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ನವೀನ್ ಗೌಡ ಸವಣಾಲು ಜು.29 ರಂದು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಶ್ರೀ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ದಕ್ಷಿಣ ಕನ್ನಡ ಜಿಲ್ಲಾ ವ್ಯವಸ್ಥಾಪಕರಿಗೆ ಕಾರಣ ಕೇಳಿ ಜು.31 ರಂದು ನೋಟಿಸ್ ಜಾರಿಗೊಳಿಸಲಾಗಿದೆ.ನೋಟಿಸ್‌ನಲ್ಲಿ ಸರ್ಕಾರಿ ಸಭೆ-ಸಮಾರಂಭಗಳಲ್ಲಿ ಕಡ್ಡಾಯವಾಗಿ ಶಿಷ್ಟಾಚಾರ ಪಾಲಿಸುವಂತೆ ಸರ್ಕಾರವು ಅನೇಕ ಬಾರಿ ಸುತ್ತೋಲೆಗಳು ಹಾಗೂ ಮಾರ್ಗಸೂಚಿಗಳನ್ನು ಹೊರಡಿಸಿದ್ದರೂ, ಸಂಬಂಧಿತ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ ಎಂದು ಉಲ್ಲೇಖಿಸಲಾಗಿದೆ.
ಮೂರು ದಿನಗಳೊಳಗೆ ಲಿಖಿತ ವಿವರಣೆ ಸಲ್ಲಿಸುವಂತೆ ನೋಟೀಸ್ ನಲ್ಲಿ ಸೂಚಿಸಲಾಗಿದೆ.