Home ಸ್ಥಳೀಯ ಸಮಾಚಾರ ಅಪಾಯಕಾರಿ ಮರದ ಕಾಲುಸಂಕ ಪ್ರದೇಶಕ್ಕೆ ಬೆಳ್ತಂಗಡಿ ನ್ಯಾಯಾಧೀಶರ ಭೇಟಿ

ಅಪಾಯಕಾರಿ ಮರದ ಕಾಲುಸಂಕ ಪ್ರದೇಶಕ್ಕೆ ಬೆಳ್ತಂಗಡಿ ನ್ಯಾಯಾಧೀಶರ ಭೇಟಿ

2
0

ಬೆಳ್ತಂಗಡಿ;  ಲಾಯಿಲ ಗ್ರಾಮದ ಬರೆಮೇಲು ನಡುಗುಡ್ಡೆ ಎಂಬಲ್ಲಿರುವ ಅಪಾಯಕಾರಿ ಕಾಲುಸಂಕವನ್ನು ಬೆಳ್ತಂಗಡಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು , ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಮನು ಬಿ.ಕೆ , ಪ್ರಧಾನ ಸಿವಿಲ್ ನ್ಯಾಯಾಧೀಶರು , ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ರಾಮಲಿಂಗಪ್ಪ ರವರು ಅದಿತ್ಯವಾರ ಸಂಜೆ ಭೇಟಿ ನೀಡಿ ವೀಕ್ಷಿಸಿದರು.

ಲಾಯಿಲ ಪರಿಶಿಷ್ಟ ಜಾತಿ/ ಪಂಗಡಗಳ ವಿಶೇಷ ಗ್ರಾಮಸಭೆಯಲ್ಲಿ ವ್ಯಾಪಕ ಚರ್ಚೆ , ಮಾಧ್ಯಮಗಳ ವರದಿಯ ನಂತರ ಶುಕ್ರವಾರ ಅಧಿಕಾರಿಗಳ ದಂಡು ಈ ಪ್ರದೇಶಕ್ಕೆ ಭೇಟಿ ನೀಡಿದ್ದರು. ಇದೀಗ ಬೆಳ್ತಂಗಡಿ ನ್ಯಾಯಾದೀಶರುಗಳಾದ ಮನು ಬಿ.ಕೆ , ರಾಮಲಿಂಗಪ್ಪ ರವರು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಖುದ್ದಾಗಿ ವೀಕ್ಷಿಸಿ , ಸಾರ್ವಜನಿಕರೊಂದಿಗೆ ಮಾತನಾಡಿದರು. ಈ ಕಾಲುಸಂಕವನ್ನು ಅವಲಂಬಿಸಿರುವ ಕುಟುಂಬಗಳ ಮಾಹಿತಿಯೊಂದಿಗೆ ಹಿರಿಯ ನಾಗರಿಕರು , ವಿದ್ಯಾರ್ಥಿಗಳು , ವಿಶೇಷ ಚೇತನರು , ವಿಧವೆಯರ ಬಗ್ಗೆ ಪ್ರತ್ಯೇಕ ಮಾಹಿತಿಯನ್ನು ಸಂಗ್ರಹಿಸಿ , ಸೋಮವಾರ ಮಧ್ಯಾಹ್ನದೊಳಗೆ ವರದಿ ನೀಡುವಂತೆ ಲಾಯಿಲ ಗ್ರಾಮ ಪಂಚಾಯತ್ ನ ಪಿಡಿಓ ಹಾಗೂ ಲಾಯಿಲ ಗ್ರಾಮಾಡಳಿತಾಧಿಕಾರಿ ಯವರಿಗೆ ಸೂಚಿಸಿದರು.

ನ್ಯಾಯಾದೀಶರುಗಳು ಅಭಿವೃದ್ಧಿ ವಂಚಿತ ಬರಮೇಲು ನಡುಗುಡ್ಡೆ ಭೇಟಿ ಮೂಲಕ ಈ ಭಾಗದ ಬಹುಕಾಲದ ಸೇತುವೆಯ ಬೇಡಿಕೆಯೊಂದು ಈಡೇರುವ ಆಶಾ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ.

ಈ ಸಂದರ್ಭದಲ್ಲಿ ನ್ಯಾಯಾದೀಶರ ಜೊತೆಗೆ ಬೆಳ್ತಂಗಡಿ ಪೋಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆನಂದ , ಬೆಳ್ತಂಗಡಿ ಉಪ ತಹಶೀಲ್ದಾರ್ ಮಲ್ಲಪ್ಪ ನಡುಗಡ್ಡಿ , ವೇಣೂರು ಹೋಬಳಿ ಕಂದಾಯ ನಿರೀಕ್ಷಕ ಕುಮಾರಸ್ವಾಮಿ , ತಾಲೂಕು ಕಾನೂನು ಸೇವೆಗಳ ಸಮಿತಿಯ ಸಿಬ್ಬಂದಿ ಯಲ್ಲಪ್ಪ ಹಂಗರಗಿ , ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಭಿವೃದ್ಧಿ ಅಧಿಕಾರಿ ತಾರಾನಾಥ ನಾಯ್ಕ್ , ಲಾಯಿಲ ಗ್ರಾಮಾಡಳಿತಾಧಿಕಾರಿ ರನಿತಾ , ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ ,ದಲಿತ ಮುಖಂಡ ಶೇಖರ್ ಲಾಯಿಲ, ಗ್ರಾಮ ಸಹಾಯಕ ಸತೀಶ್ ಹೆಗ್ಡೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here