
ಬೆಳ್ತಂಗಡಿ: ಮಹಾತ್ಮ ಗಾಂಧಿ ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆಗಳ ವಿಶೇಷ ಗ್ರಾಮ ಸಭೆ ಜು. 22 ರಂದು ಗ್ರಾ.ಪಂ. ಭಾರತಮಾತಾ ಸಭಾವನದಲ್ಲಿ ನಡೆಯಿತು.
ರಾಜ್ಯ ಸರಕಾರ ದಲಿತರ ಕಲ್ಯಾಣಕ್ಕಾಗಿ ಗ್ರಾ.ಪಂ.ಗಳಲ್ಲಿ ಈ ವಿಶೇಷ ಗ್ರಾಮ ಸಭೆ ನಡೆಸುತ್ತಿದೆ ಆದರೆ ಈ ವರ್ಗದ ಶ್ರೇಯೋಭಿವೃದ್ದಿಗಾಗಿ ಕ್ರಮ ವಹಿಸಬೇಕಾದ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸದೇ ಅಸಡ್ಡೆ ತೋರಿದ್ದಾರೆ, ಸಭೆಯಲ್ಲಿ ಸಮುದಾಯದವರು ಬಿಟ್ಟಲ್ಲಿ ಅಧಿಕಾರಿಗಳ ಸಂಖ್ಯೆ ತೀರ ಕಡಿಮೆ ಇದೆ. ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸದಿರುವುದು ಸರಕಾರ ಪ್ರೇರಿತ ದೌರ್ಜನ್ಯ ಎಂದು ಗ್ರಾಮಸ್ಥ ಶೇಖರ್ ಲಾಯಿಲ ಅಸಮಾಧಾನ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ಯೋಜನೆ ವತಿಯಿಂದ ಕೆಲ ಮಂದಿಗಳಿಗಷ್ಟೆ ಅಡುಗೆ ಅನಿಲ ವಿತರಿಸಲಾಗುತ್ತಿದೆ ಇದರ ಸಂಖ್ಯೆಯನ್ನು ಹೆಚ್ಚಿಸಿ ಅನೇಕ ಮಂದಿಗೆ ಲಭಿಸಲು ಕ್ರಮ ವಹಿಸಬೇಕು. ಲಾಯಿಲ-ನಿನ್ನಿಕಲ್ಲು ರಸ್ತೆಯ ಅಂಕಾಜೆ ಎಂಬಲ್ಲಿ ಅಪಾಯಕಾರಿ ಮರಗಳಿದ್ದು ಯಾವುದೇ ಅನಾಹುತ ಸಂಭವಿಸುವ ಮೊದಲು ಮಾನವೀಯ ದೃಷ್ಟಿಯಿಂದ ಅವುಗಳನ್ನು ತೆರವುಗೊಳಿಸಬೇಕು ಎಂದು ಅರಣ್ಯಾಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದರು.
ಪುತ್ರಬೈಲಿನಲ್ಲಿ ಸಮುದಾಯ ಭವನ ಬೀಳುವ ಹಂತಕ್ಕೆ ತಲುಪಿದೆ. ನಿತ್ಯ ನಾನಾ ಕಾರ್ಯಕ್ರಮಗಳಿಗೆ ಕಾರ್ಯಚರಿಸುವ ಈ ಭವನದ ಸ್ಥಿತಿ ಪ್ರಸ್ತುತ ಶೋಚನೀಯ ಆದರೆ ಈ ಕುರಿತು ಇಲಾಖೆಗಳ ಗಮನಕ್ಕೆ ಬಂದಿದ್ದರೂ ದುರಸ್ತಿಗೊಳಿಸದೆ ಅಸಡ್ಡೆ ತೋರುತ್ತಿದೆ. ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ ರಾಜ್ಯಾಧ್ಯಕ್ಷರಾದ ಪಲ್ಲವಿಯವರು ಭೇಟಿ ನೀಡಿದರೂ ಇದುವರೆಗೆ ಯಾವುದೇ ಸೂಕ್ತ ಕ್ರಮಕೈಗೊಳ್ಳದಿರುವುದು ಬೇಸರ ಸಂಗತಿ ಎಂದು ಸುರೇಶ್ ಬೈರ ಸಭೆಯ ಗಮನಕ್ಕೆ ತಂದರು.
ಅನೇಕ ಸಮಾರಂಭಗಳಿಗೆ ಸಾಕ್ಷಿಯಾಗಿದ್ದ ಪಡ್ಲಾಡಿ ಅಂಬೇಡ್ಕರ್ ಭವನ ಶಿಥಿಲ ವ್ಯವಸ್ಥೆಗೆ ತಲುಪಿದೆ. ಮೇಲ್ಚಾವಣಿ ಶೀಟ್ ಹಾನಿಯಾಗಿ ಮಳೆನೀರು ಸೋರುತ್ತಿದೆ, ಬಾಗಿಲು ಮುರಿದು ಹೋಗಿದೆ, ಶಟರ್ ತುಕ್ಕುಹಿಡಿದ್ದು ಇದುವರೆಗೂ ದುರಸ್ತಿ ನಡೆಯದಿರುವುದು ವಿಪರ್ಯಾಸವೇ ಸರಿ ಎಂದು ಶೇಖರ್ ಲಾಯಿಲ ಕಳವಳ ವ್ಯಕ್ತಪಡಿಸಿದರು.
ಲಾಯಿಲ ಗ್ರಾಮದ ನಡುಗುಡ್ಡೆ ಎಂಬಲ್ಲಿ ಅಡಿಕೆ ಪಾಲದಲ್ಲಿ ಶಾಲಾ ಮಕ್ಕಳು ತೋಡು ದಾಟಬೇಕಾದ ಭಯಭೀತಿಯ ದುಸ್ಥಿತಿ ಗ್ರಾಮದಲ್ಲಿದೆ. ಮಳೆಗಾಲದಲ್ಲಿ ನೀರಿನಮಟ್ಟ ಹೆಚ್ಚಿದ್ದು ರಭಸದಿಂದ ತೋಡಿನಲ್ಲಿ ನೀರು ಹರಿಯುತ್ತದೆ. ನಿತ್ಯ ಪೋಷಕರಿಗೆ ಮಕ್ಕಳನ್ನು ಪಾಲದಲ್ಲಿ ದಾಟಿಸುವ ಸವಾಲು ತಪ್ಪಿಲ್ಲ. ಸಮಾಜ ಕಲ್ಯಾಣ ಇಲಾಖೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಒಂದು ತಿಂಗಳೊಳಗೆ ಕ್ರಮ ವಹಿಸಬೇಕು. ಒಂದು ವೇಳೆ ಇತ್ಯರ್ಥಗೊಳಿಸದಿದ್ದಲ್ಲಿ ಇಲಾಖೆಯ ಮುಂಭಾಗದಲ್ಲಿ ಜನರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಶೇಖರ್ ಲಾಯಿಲ ಎಚ್ಚರಿಕೆಯನ್ನು ನೀಡಿದರು.
ಅನೇಕ ಕುಟಂಬಗಳು ಟಾರ್ಪಲ್ ಹೊದಿಕೆಯಲ್ಲಿ ಜೀವನ ಕಳೆಯುತ್ತಿದೆ. ಸ್ವಾತಂತ್ರ್ಯ ದೇಶಕ್ಕೆ ಏನೋ ದೊರೆಯಿತು ಆದರೆ ದಲಿತರಿಗೆ ಇನ್ನೂ ದೊರತಿಲ್ಲ, ಕಳೆದ ಐದು ವರ್ಷಗಳಿಂದ ಗ್ರಾಮಸಭೆಯಲ್ಲಿ ನಿರ್ಣಯಾಗೊಂಡ ವಿಚಾರಗಳು ಇದುವರೆಗೂ ಬಗೆಹರಿದಿಲ್ಲ. ಆಯಿಲ ಕಾಂಕ್ರೀಟ್ ರಸ್ತೆ ಬದಿ ಕುಸಿದಿದ್ದು ತಡೆಗೋಡೆಯ ಅಗತ್ಯತೆ ಇದೆ ಎಂದು ಸಭೆಯ ಗಮನಕ್ಕೆ ತರಲಾಯಿತು.
ಲಾಯಿಲ ಸ್ಮಶಾನದಿಂದ ಲಾಯಿಲಬೈಲು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ 1.50 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ ಅಧಿಕಾರಿಗಳು ಹಿಂದುರುಗಿದ ಬಳಿಕ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿಲ್ಲ ಎಂದು ಶೇಖರ್ ಲಾಯಿಲ ಅಮಾಸಧಾನ ವ್ಯಕ್ತಪಡಿಸಿದರು. ವಸತಿ ನಿರ್ಮಾಣಕ್ಕೆ ಸರಕಾರ 1.75 ಲಕ್ಷ ರೂ.ಅನುದಾನ ನೀಡುತ್ತದೆ ಆದರೆ ಪ್ರಸ್ತುತ ಕಲ್ಲು, ಮರಳು ದರದ ಏರಿಕೆಯಾಗಿದ್ದು ಈ ಹಣದಲ್ಲಿ ಮನೆ ನಿರ್ಮಾಣ ಅಸಾಧ್ಯ ಹಾಗಾಗಿ ಸರಕಾರ ವಸತಿ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ನೀಡುವಂತೆ ಗ್ರಾಮಸ್ಥ ಜಗನ್ನಾಥ ಬೈರ ಆಗ್ರಹಿಸಿದರು.
ಸರಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಯೊಂದು 5 ಎಕ್ರೆ ಸರಕಾರಿ ಜಮೀನು ಶಿಕ್ಷಣ ಸಂಸ್ಥೆಗೆ ನೀಡುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ ಆದರೆ ಗ್ರಾಮದಲ್ಲಿ ಎಸ್ಸಿ/ಎಸ್‌ಟಿ ಕುಟುಂಬಗಳಿಗೆ ನಿವೇಶನಕ್ಕೆ ನೀಡಲು ಜಾಗವಿಲ್ಲ ಎನ್ನುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಶೇಖರ್ ಲಾಯಿಲ ಈ ಸಂಸ್ಥೆ ಲಾಯಿಲ ಗ್ರಾಮದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಿಲ್ಲ ಆದುದರಿಂದ ಅವರು ಸರಕಾರಕ್ಕೆ ಸಲ್ಲಿಸಿರುವ ಮನವಿಯನ್ನು ರದ್ದುಗೊಳಿಸಿ ನಿವೇಶನ ವಂಚಿತ ಎಸ್ಸಿ/ಎಸ್ಟಿ ಸಮುದಾಯದ 116 ಮಂದಿಗೆ ನೀಡುವಂತೆ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ ಅವರು ಮುಂದಿನ ಡಿಸೆಂಬರ್ ತಿಂಗಳ ಒಳಗಾಗಿ ಗ್ರಾಮದ 350 ನಿವೇಶನ ರಹಿತರಿಗೆ ನಿವೇಶನ ನೀಡದಿದ್ದರೆ ಸರ್ಕಾರಿ ಜಮೀನು ಅತಿಕ್ರಮಣ ಮಾಡಿ ನಾವೇ ಮನೆ ನಿರ್ಮಾಣ ಮಾಡಿಕೊಳ್ಳುತ್ತವೆ. ಮುಂದಾಗುವ ಅನಾಹುತಕ್ಕೆ ಗ್ರಾಮ ಪಂಚಾಯತ್ , ಕಂದಾಯ ಇಲಾಖೆ ನೇರ ಹೊಣೆಯಾಗುತ್ತವೆ ಎಂದು ಎಚ್ಚರಿಕೆ ನೀಡಿದರು . ಸದ್ರಿ ಸ್ಥಳಕ್ಕೆ ಬಂದಿರುವ ಆಕ್ಷೇಪ, ನ್ಯೂನತೆಗಳನ್ನು ಕ್ರೂಡಿಕರಿಸಿ ವರದಿ ಸಲ್ಲಿಸಿರುವುದಾಗಿ ಗ್ರಾಮ ಆಡಳಿತಾಧಿಕಾರಿ ರನಿತಾ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಸಮೀಪ ಖಾಸಗಿ ಶಿಕ್ಷಣ ಸಂಸ್ಥೆಯ ಬದಿಯಲ್ಲಿರುವ ಖಾಲಿ ಜಾಗವನ್ನು ನೂತನ ಡಿವೈಎಸ್ಪಿ ಕಚೇರಿ ನಿರ್ಮಾಣಕ್ಕೆ ಮೀಸಲಿಟ್ಟು ಮಂಜೂರುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದರು.
ನೇತಾಜಿ ಬಡವಾಣೆ ಸಮಸ್ಯೆ ಕಳೆದ 14 ವರ್ಷದಿಂದ ಇತ್ಯರ್ಥಗೊಳ್ಳದೆ ಹಾಗೇಯೆ ಮುಂದುವರಿಯುತ್ತಿದೆ. ಹಿಂದೆ ನೀಡಿದ ನಿವೇಶನ ಜಾಗಗಳು ಖಾಲಿ ಬಿದ್ದಿದ್ದು, ಒತ್ತುವರಿ ನಡೆಯುತ್ತಿದೆ ಆದರೆ ಇಲಾಖೆ ಮರೆತೆ ಬಿಟ್ಟಿದೆ. ಸರಕಾರ ನೀಡಿದ ನಿವೇಶನ ಭೂಮಿಯನ್ನು ಮಾರಾಟಗೊಳಿಸಲು ಅವಕಾಶ ನೀಡಬಾರದು ಹೊರತಾಗಿ ಕ್ರಮ ವಹಿಸಬೇಕಿದೆ. ನಿವೇಶನ ಪಡೆದು ಅಲ್ಲಿ ಮನೆ ನಿರ್ಮಿಸಿ ಬಾಡಿಗೆ ನೀಡುವುದು, ಅ ಸ್ಥಳವನ್ನು ಮಾರಾಟ ಮಾಡುವುದು, ಒಂದೇ ಮನೆಯವರು 3-4 ನಿವೇಶನ ಪಡೆದು ದುರುಪಯೋಗ ಗೋಳಿಸಿ ದಂಧೆ ನಡೆಸುತ್ತಿದ್ದಾರೆ. 02.45 ಸೆಂಟ್ಸ್ ಭೂಮಿಗೆ 10 ಲಕ್ಷ ರೂ.ಬ್ಯಾಂಕ್ ಸಾಲ ನೀಡುತ್ತಿರುವ ಹಗರಣ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ನಿವೇಶನ ಸ್ಥಳದಲ್ಲಿ ಮನೆ ನಿರ್ಮಿಸಿ ಬಾಡಿಗೆ ನೀಡಿದಲ್ಲಿ ಆ ನಿವೇಶನವನ್ನು ರದ್ದುಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಶೇಖರ್ ಲಾಯಿಲ ನೇತಾಜಿ ಬಡಾವಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದರು.
ಗಂಡು ಮಕ್ಕಳು ಇದ್ದಲ್ಲಿ ಪಿಂಚಣಿ ವ್ಯವಸ್ಥೆಗೆ ಒಳಪಡುವುದಿಲ್ಲ ಎಂದು ನಿಯಮಗಳು ತಿಳಿಸುತ್ತದೆ ಆದರೆ ಮಾಜಿ ಶಾಸಕರುಗಳಿಗೆ ಗಂಡು ಮಕ್ಕಳು ಇದ್ದರೂ ಕೂಡ ಅವರಿಗೆ ಪಿಂಚಣಿ ನೀಡಲಾಗುತ್ತದೆ ಇದು ಎಷ್ಟು ಸರಿ ಆದರೆ ಸರಕಾರಕ್ಕೆ ಬಡವರ ಕಲ್ಯಾಣಕ್ಕೆ ನೀಡಲು ಹಣವಿಲ್ಲ ಎಂಬುವುದು ಬೇಸರ ಸಂಗತಿ ಎಂದು ಸಭೆಯಲ್ಲಿ ಸುರೇಶ್ ಬೈರ ಆಕ್ರೋಶ ವ್ಯಕ್ತಪಡಿಸಿದರು.
ಬಜಕ್ರೆಸಾಲು ಎಂಬಲ್ಲಿ ಬೆಟ್ಟದ ಮೇಲೆ ವಾಸವಿರುವ ಕುಟುಂಬಗಳಿಗೆ ರಸ್ತೆ ನಿರ್ಮಾಣಕ್ಕೆ ಭೂಮಾಲೀಕರೊಬ್ಬರು ತಡೆಯೊಡ್ಡುತ್ತಿದ್ದಾರೆ ಇಲ್ಲಿ ರಸ್ತೆ ನಿರ್ಮಾಣಕ್ಕೆ ಗ್ರಾ.ಪಂ.ಅವಕಾಶ ಮಾಡಿಕೊಡಬೇಕು. ಅಮೃತ ಮಹೋತ್ಸವ ಹೊಸ್ತಿಲಿನಲ್ಲಿರುವ ಶಾಲೆಯನ್ನು ದುರಸ್ತಿಗೊಳಿಸುವಂತೆ ಸಭೆಯಲ್ಲಿ ಶೇಖರ್ ಲಾಯಿಲ ಒತ್ತಾಯಿಸಿದರು.
ಸರ್ಕಾರ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಖುದ್ದಾಗಿ ಪ್ರತಿ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂಬ ಸರ್ಕಾರದ ಆದೇಶ ಇದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ನೆಟ್ ವರ್ಕ್ ಸೇರಿದಂತೆ ಇನ್ನಿತರ ತಾಂತ್ರಿಕ ಸಮಸ್ಯೆಗಳಿಂದ ಸಮಸ್ಯೆಗಳಾಗುತಿದ್ದು, ಈಗಾಗಲೇ ಮೆಸ್ಕಾಂ ಇಲಾಖೆಯಲ್ಲಿ ಜನರು ಕ್ಯೂ ನಿಲ್ಲುತಿದ್ದು ಇದರಿಂದಾಗಿ ಜನ ಸಾಮಾನ್ಯರಿಗೆ ತೊಂದರೆಯಾಗುತಿದ್ದು, ಈ ನಿಟ್ಟಿನಲ್ಲಿ ಗ್ರಾಮಸ್ಥರ ಅನುಕೂಲಕ್ಕಾಗಿ ಮೆಸ್ಕಾಂ ಇಲಾಖೆಯ ಸಹಕಾರದಲ್ಲಿ ಪಂಚಾಯತ್ ನೇತೃತ್ವದಲ್ಲಿ ವಾರ್ಡ್ ಮಟ್ಟದಲ್ಲಿ ಗೃಹಜ್ಯೋತಿ ಯೋಜನೆ ಅನುಷ್ಠಾನ ಮಾಡಬೇಕು ಎಂದು ಶೇಖರ್ ಲಾಯಿಲ ಸಭೆಯಲ್ಲಿ ಆಗ್ರಹಿಸಿದರು. ಈ ವೇಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡ್ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಹಿರಿಯರಾದ ಲಿಂಗಪ್ಪ ನಾಯ್ಕ್ ಬಾಳ ಸಭಾಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಧೀರಜ್, ಬೆಳ್ತಂಗಡಿ ವಲಯ ಉಪ ಅರಣ್ಯಾಧಿಕಾರಿ ಕಿರಣ್ ಪಾಟೀಲ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರನಾಥ್ ನಾಯ್ಕ್, ಗ್ರಾಮಾಡಳಿತಾಧಿಕಾರಿ ರನಿತಾ, ಗ್ರಾ.ಪಂ.ಲೆಕ್ಕ ಸಹಾಯಕಿ ಸುಪ್ರೀತಾ ಶೆಟ್ಟಿ ವೇದಿಕೆಯಲ್ಲಿದ್ದರು.