Home ಅಪರಾಧ ಲೋಕ ಮಂಗಳೂರು; ದರೋಡೆ ಪ್ರಕರಣ ನೇಪಾಳ ಮೂಲದ ಮೂವರು ಆರೋಪಿಗಳ ಬಂಧನ 10 ಲಕ್ಷ ಮೌಲ್ಯದ ಸೊತ್ತುಗಳು...

ಮಂಗಳೂರು; ದರೋಡೆ ಪ್ರಕರಣ ನೇಪಾಳ ಮೂಲದ ಮೂವರು ಆರೋಪಿಗಳ ಬಂಧನ 10 ಲಕ್ಷ ಮೌಲ್ಯದ ಸೊತ್ತುಗಳು ವಶಕ್ಕೆ

0

ಮಂಗಳೂರು: ನಗರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಕೇವಲ ಐದು ದಿನಗಳಲ್ಲಿ ಭೇದಿಸಿರುವ ಬರ್ಕೆ ಪೊಲೀಸರು, ನೇಪಾಳ ಮೂಲದ ಅಂತಾರಾಷ್ಟ್ರೀಯ ಮನೆಗಳ್ಳರ ಜಾಲಕ್ಕೆ ಸೇರಿದ ಮೂವರು ಆರೋಪಿಗಳನ್ನು ಬಂಧಿಸಿ, ಸುಮಾರು ₹10 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ತಿಲಕ್ ಕುಮಾರ್ ಖಡ್ಕ (36), ಅಶೋಕ್ ರಾಜ್ ಅಲಿಯಾಸ್ ಅಶೋಕ್ ಸಿಂಗ್ (33) ಹಾಗೂ ದಿಪೆಂರ್ದ ರಸೈಲಿ (25) ಎಂದು ಗುರುತಿಸಲಾಗಿದೆ. ಮೂವರೂ ನೇಪಾಳ ಮೂಲದವರಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

ನಗರದ ಉರ್ವ ಮಾರ್ಕೆಟ್ ಸಮೀಪದ ಮಠದಕಣಿಯಲ್ಲಿರುವ ಮನೆಯೊಂದರಲ್ಲಿ ಜುಲೈ 11ರಂದು ಸಂಜೆ ಮನೆಯವರು ಬೀಗ ಹಾಕಿ ಬಂಟ್ವಾಳ ತಾಲೂಕಿನ ವಿಟ್ಲ ಕಡಂಬುವಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಜುಲೈ 12ರಂದು ಬೆಳಗ್ಗೆ ಮನೆಗೆ ಮರಳಿದಾಗ ಮನೆಯ ಹಿಂಬದಿಯ ಬಾಗಿಲನ್ನು ಮುರಿದು ಒಳನುಗ್ಗಿದ್ದ ಕಳ್ಳರು ಸುಮಾರು 64 ಗ್ರಾಂ ಚಿನ್ನಾಭರಣ, ₹25 ಸಾವಿರ ನಗದು ಸೇರಿದಂತೆ ಒಟ್ಟು ₹8.57 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರಂಭಿಸಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬರ್ಕೆ ಠಾಣೆ ಪೊಲೀಸರು ತಾಂತ್ರಿಕ ಮಾಹಿತಿ ಹಾಗೂ ಗುಪ್ತಚರ ಜಾಲದ ನೆರವಿನಿಂದ ಜುಲೈ 17ರ ಮುಂಜಾನೆ ಬೋಳೂರು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ನೇಪಾಳ ಮೂಲದ ಮೂವರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿದ್ದಾರೆ ಆರೋಪಿಗಳ ವಿಚಾರಣೆ ವೇಳೆ ಬರ್ಕೆ ಠಾಣೆ ವ್ಯಾಪ್ತಿಯಲ್ಲಿ ಕಳವಾಗಿದ್ದ ಎಲ್ಲಾ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ 790 ಗ್ರಾಂ ಬೆಳ್ಳಿ ಆಭರಣಗಳನ್ನೂ ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ ವಶಪಡಿಸಿಕೊಂಡ ಸೊತ್ತಿನ ಮೌಲ್ಯ ಸುಮಾರು ₹10 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ವೇಳೆ ಆರೋಪಿಗಳು ಈ ವರ್ಷದ ಮಾರ್ಚ್ ತಿಂಗಳಲ್ಲಿ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಯತ್ನ ಪ್ರಕರಣದಲ್ಲೂ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣದಲ್ಲಿ ಯಾವುದೇ ವಸ್ತು ಕಳವಾಗಿರದಿದ್ದರೂ, ಅವರ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳ ವಿರುದ್ಧ ಕರ್ನಾಟಕದ ಬೆಂಗಳೂರು, ದಾವಣಗೆರೆ, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಮನೆ ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ತಮಿಳುನಾಡು, ದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲಿಯೂ ಆರೋಪಿಗಳ ವಿರುದ್ಧ ಪ್ರಕರಣಗಳಿರುವ ಮಾಹಿತಿ ಲಭ್ಯವಾಗಿದ್ದು, ಸಂಬಂಧಿತ ರಾಜ್ಯಗಳ ಪೊಲೀಸರಿಂದ ಮಾಹಿತಿ ಸಂಗ್ರಹಿಸಿ ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ.

ಕಾರ್ಯಚರಣೆಯಲ್ಲಿ ಬರ್ಕೆ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳನ್ನು ಭಾಗವಹಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version