
ಬೆಳ್ತಂಗಡಿ, ಜು.15: “ನಮ್ಮ ಆಹಾರ – ನಮ್ಮ ಹಕ್ಕು, ಕರಾವಳಿಯ ತಟ್ಟೆಗೆ ಕುಚ್ಚಲು ಬೇಕು” ಎಂಬ ಘೋಷಣೆಯೊಂದಿಗೆ ಪಡಿತರ ವ್ಯವಸ್ಥೆಯ ಮೂಲಕ ಕುಚ್ಚಲು ಅಕ್ಕಿಯನ್ನು ವಿತರಿಸುವಂತೆ ಆಗ್ರಹಿಸಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ಬುಧವಾರ ಬೆಳ್ತಂಗಡಿಯ ನ್ಯಾಯಬೆಲೆ ಅಂಗಡಿಗಳ ಮುಂಭಾಗ ಸಾಂಕೇತಿಕ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಕರಾವಳಿ ಭಾಗದ ಸಾವಿರಾರು ಕುಟುಂಬಗಳ ಆಹಾರ ಪದ್ಧತಿಯಲ್ಲಿ ಕುಚ್ಚಲು ಅಕ್ಕಿಗೆ ವಿಶೇಷ ಸ್ಥಾನವಿದೆ. ಸ್ಥಳೀಯರ ಆಹಾರ ಸಂಸ್ಕೃತಿ ಹಾಗೂ ಜೀವನಶೈಲಿಗೆ ಹೊಂದುವ ಆಹಾರ ಧಾನ್ಯವನ್ನು ಪಡಿತರ ವ್ಯವಸ್ಥೆಯ ಮೂಲಕ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ಕರಾವಳಿ ಭಾಗದ ಜನರ ಆಹಾರ ಹಕ್ಕಿಗೆ ಗೌರವ ನೀಡಿ, ಕುಚ್ಚಲು ಅಕ್ಕಿಯನ್ನು ಪಡಿತರ ವ್ಯವಸ್ಥೆಯ ಮೂಲಕ ವಿತರಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ಅಂಗವಾಗಿ ನ್ಯಾಯಬೆಲೆ ಅಂಗಡಿಗೆ ಆಗಮಿಸಿದ ಸಾರ್ವಜನಿಕರಿಗೆ ಸಾಂಕೇತಿಕವಾಗಿ ಕುಚ್ಚಲು ಅಕ್ಕಿಯನ್ನು ವಿತರಿಸುವ ಮೂಲಕ ಸರ್ಕಾರ ಕರಾವಳಿ ಭಾಗದ ಜನರ ಆಹಾರ ಪದ್ಧತಿಗೆ ಅನುಗುಣವಾಗಿ ಪಡಿತರ ವ್ಯವಸ್ಥೆಯಲ್ಲಿಯೂ ಕುಚ್ಚಲು ಅಕ್ಕಿಯನ್ನು ಒದಗಿಸಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಕ್ಷೇತ್ರ ಕಾರ್ಯದರ್ಶಿ ರಶೀದ್ ಬೆಳ್ತಂಗಡಿ, ಲಾಯಿಲ ಬ್ಲಾಕ್ ಅಧ್ಯಕ್ಷ ಸಲೀಂ ಲಾಯಿಲ, ಬೆಳ್ತಂಗಡಿ ನಗರ ಸಮಿತಿ ಅಧ್ಯಕ್ಷ ರಿಯಾಝ್ ಬೆಳ್ತಂಗಡಿ, ಕಾರ್ಯದರ್ಶಿ ಬಶೀರ್ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.