
ಬೆಳ್ತಂಗಡಿ: ಅರಸಿನಮಕ್ಕಿ ಸಮೀಪದ ಮದ್ದಡ್ಕ ಎಂಬಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ ಎರಡು ದಿನಗಳಿಂದ ನಿರಂತರವಾಗಿ ಕೃಷಿ ತೋಟಗಳಿಗೆ ದಾಳಿ ನಡೆಸುತ್ತಿದ್ದು ರೈತರಲ್ಲಿ ಆತಂಕ ಮೂಡಿಸಿದೆ.
ಮದ್ದಡ್ಕದ ಶ್ರೀಧರ್ ಎಸ್. ಹಾಗೂ ಸುಬ್ರಹ್ಮಣ್ಯ ಅವರಿಗೆ ಸೇರಿದ ಅನ್ನಪೂರ್ಣ ಫಾರ್ಮ್ ಮೇಲೆ ಕಾಡಾನೆಗಳು ರಾತ್ರಿ ವೇಳೆ ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶಪಡಿಸಿವೆ. ಆನೆಗಳ ದಾಳಿಯಿಂದ ಸುಮಾರು 10 ತೆಂಗಿನ ಮರಗಳು, 150ಕ್ಕೂ ಹೆಚ್ಚು ಫಸಲಿಗೆ ಬಂದಿದ್ದ ಬಾಳೆ ಗಿಡಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ತೋಟದ ನೀರಾವರಿ ವ್ಯವಸ್ಥೆಗೆ ಅಳವಡಿಸಿದ್ದ ಪೈಪ್‌ಗಳು ಸಹ ಜಖಂಗೊಂಡಿವೆ. ಇದರಿಂದ ರೈತರಿಗೆ ಅಪಾರ ನಷ್ಟ ಉಂಟಾಗಿದೆ.
ಕಾಡಾನೆಗಳ ಸಮಸ್ಯೆಗ ಶಾಶ್ವತ ಪರಿಹಾರ ಕಾಣುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಕೃಷಿಕರು ಒತ್ತಾಯಿಸುತ್ತಿದ್ದಾರೆ.