Home ಅಪರಾಧ ಲೋಕ ಬೆಳ್ತಂಗಡಿ : ನಗರದಲ್ಲಿ ಸರಣಿ ಕಳ್ಳತನ ಪ್ರಕರಣ; ಅಂತರ್ ರಾಜ್ಯ ಕುಖ್ಯಾತ ಕಳ್ಳನನ್ನು ಬಂಧಿಸಿದ ಬೆಳ್ತಂಗಡಿ...

ಬೆಳ್ತಂಗಡಿ : ನಗರದಲ್ಲಿ ಸರಣಿ ಕಳ್ಳತನ ಪ್ರಕರಣ; ಅಂತರ್ ರಾಜ್ಯ ಕುಖ್ಯಾತ ಕಳ್ಳನನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

0

ಬೆಳ್ತಂಗಡಿ : ನಗರದ ಮೂರುರ್ಮಾಗದ ಬಳಿಯಿಂದ ಹಾಗೂ ಕೋರ್ಟ್ ರಸ್ತೆಯವರೆಗೆ ಮೇ. 19 ರಂದು ತಡರಾತ್ರಿ 11 ಕಡೆಗಳಲ್ಲಿ ಕಳ್ಳತನ ನಡೆಸಿ ನಗದು ಸಹಿತ ಇನ್ನಿತರ ವಸ್ತುಗಳನ್ನ ದೋಚಿದ್ದ ಅಂತರ್ ರಾಜ್ಯ ಕುಖ್ಯಾತ ಕಳ್ಳನನ್ನು ಬೆಳ್ತಂಗಡಿ ಪೊಲೀಸರು 50 ದಿವಸದ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನದ ಬಳಿಕ ಈತ ಉಪ್ಪಿನಂಗಡಿ ಹಾಗೂ ಸುರತ್ಕಲ್ ನಲ್ಲಿ ಆತ ಸರಣಿ ಕಳ್ಳತನ ನಡೆಸಿರೋದು ಬೆಳಕಿಗೆ ಬಂದಿದೆ.
ಆರೋಪಿ ಬಂಧನ: ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ನೇತೃತ್ವದ ತಂಡಕ್ಕೆ ಗುರುವಾಯನಕೆರೆ ಜಂಕ್ಷನ್ ನಲ್ಲಿ ಜು.8 ರಂದು ಸಂಜೆ 6 ಗಂಟೆಗೆ ಅನುಮಾನಾಸ್ಪದವಾಗಿ ಓರ್ವ ವ್ಯಕ್ತಿ ತಿರುಗಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಮಿಳುನಾಡು ಜಿಲ್ಲೆಯ ಕೊಯಮುತ್ತೂರಿನ ವಿಜಯಾನ್ ಮಗ ಜಯಕುಮಾರ್(55) ಎಂಬುವುದಾಗಿ ತಿಳಿಸಿದ್ದಾನೆ. ಬಳಿಕ ಬೆಳ್ತಂಗಡಿಯಲ್ಲಿ 3 ಕಡೆ ,ಉಪ್ಪಿನಂಗಡಿಯಲ್ಲಿ 2 ಕಡೆ, ಸುರತ್ಕಲ್ ನಲ್ಲಿ 1 ಕಡೆ ಕಳ್ಳತನ ಸೇರಿ ಒಟ್ಟು ಆರು ಕಡೆಗಳಲ್ಲಿ ಸರಣಿ ಕಳ್ಳತನ ಮಾಡಿರುವುದನ್ನು ವಿಚಾರಣೆ ವೇಳೆ ಆರೋಪಿ ಬಾಯಿಬಿಟ್ಟಿದ್ದಾನೆ.
ಅಂತರ್ ರಾಜ್ಯ ಕುಖ್ಯಾತ ಕಳ್ಳ: ಕರ್ನಾಟಕ, ತಮಿಳುನಾಡು, ಕೇರಳ ಸೇರಿ ಒಟ್ಟು16 ಪ್ರಕರಣ ದಾಖಲಾಗಿದೆ. ಈತ ಅಂತರ್ ರಾಜ್ಯ ಕುಖ್ಯಾತ ಕಳ್ಳನಾಗಿದ್ದಾನೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.
ಘಟನಾ ಹಿನ್ನಲೆ : ಬೆಳ್ತಂಗಡಿ ಕೋರ್ಟ್ ರೋಡ್‌ನಲ್ಲಿರುವ ಧರ್ಮಶ್ರೀ ಕಟ್ಟಡದ ಮೊದಲನೇ ಮಹಡಿಯಲ್ಲಿ ಸಮೃದ್ಧಿ ಎಂಟರ್‌ಪ್ರೈಸ್ ನಲ್ಲಿ ಕಳ್ಳರು ರೂ.1.45 ಲಕ್ಷ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಇದರ ಮಾಲೀಕ ರಂಜಿತ್ ಹೆಚ್‌ಪಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯಾರೋ ಕಳ್ಳರು ಕಛೇರಿಯ ಬಾಗಿಲನ್ನು ಒಡೆದು ಒಳನುಗ್ಗಿ ಮೇಜಿನ ಲಾಕರ್‌ನ್ನು ಒಡೆದು, ಅದರಲ್ಲಿದ್ದ ರೂ. 1,45,000 ನಗದು ಮತ್ತು ಸಿಸಿ ಕ್ಯಾಮೆರಾದ ಮೆಮೊರಿ ಕಾರ್ಡ್ ಕಳವು ಮಾಡಿದ್ದರು. ಪಕ್ಕದ ಹನೀಫ್‌ರವರ ಕಛೇರಿಯ ಬೀಗವನ್ನು ಒಡೆದಿದ್ದರು. ವಕೀಲ ಯತೀಶ್ ಶೆಟ್ಟಿಯವರ ಕಛೇರಿ ಬೀಗ ಒಡೆದು, ರೂ.3000 ನಗದು ಕಳವು ಮಾಡಿದ್ದರು. ವಕೀಲರಾದ ವೈ. ರಾಧಾಕೃಷ್ಣ, ಮತ್ತು ಉಷಾ ಇವರ ಕಛೇರಿಯ ಬಾಗಿಲನ್ನು ಮುರಿದು ಉಷಾರವರ ಪರ್ಸ್ ಕಳವು ಮಾಡಿದ್ದು ಅದರಲ್ಲಿ ರೂ.10,000 ರೂಪಾಯಿ ಇರುವುದಾಗಿ ತಿಳಿಸಿದ್ದರು. ಬಳಿಕ ಇನ್ನೊಂದು ರೂಂ ಹಾಗೂ ಬಾತ್ ರೂಂನ ಬೀಗ ಮುರಿದಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು.
ಬೆಳ್ತಂಗಡಿಯ ಮಾತೃಶ್ರೀ ಹೋಟೇಲ್ ನಡೆಸುತ್ತಿರುವ ಪ್ರಮೋದ್ ಪೂಜಾರಿ ಅವರು ನೀಡಿರುವ ದೂರಿನಲ್ಲಿ ಹೋಟೆಲ್‌ನ ಬಾಗಿಲನ್ನು ಮುರಿದು ಒಳನುಗ್ಗಿ ಕ್ಯಾಶ್ ಟೇಬಲ್‌ನಲ್ಲಿದ್ದ ರೂ. 5 ಸಾವಿರ, ಡ್ರಾವರ್‌ನಲ್ಲಿದ್ದ ರೂ.2500 ರೂಪಾಯಿ ನಗದನ್ನು ಕಳವು ಮಾಡಿದ್ದಾರೆ. ವಕೀಲ ಜಯರಾಮ ಮಣಿಯಾನಿಯವರ ಕಚೇರಿ, ಹಿಮಾಲಯ ಫೈನಾನ್ಸ್, ಜಿತೇಶ್ ವಕೀಲರ ಕಚೇರಿ, ಶಿವಪ್ರಸಾದ್ ರಾವ್ ಅವರ ಶಬರಿ ಎಂಟರ್‌ ಪ್ರೈಸಸ್ ಹಾಗೂ ವಕೀಲ ರಾಮಚಂದ್ರ ಗೌಡರ ಕಚೇರಿ ಬೀಗ ಮುರಿದು ಒಳಗ ಹೋಗಿದ್ದು ಯಾವುದೇ ನಗದು ಕಳವು ಆಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು. ಈ ಎಲ್ಲಾ ಪ್ರಕರಣದಲ್ಲಿ ಜಯಕುಮಾರ್ ಆರೋಪಿ ಅನ್ನೋದು ಇದೀಗ ತನಿಖೆಯಲ್ಲಿ ಗೊತ್ತಾಗಿದೆ.
ಕಾರ್ಯಾಚರಣೆ: ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದಲ್ಲಿ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಮ್ ಮತ್ತು ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version