
ಬೆಳ್ತಂಗಡಿ; ನಗರದ ಬಸ್ ನಿಲ್ದಾಣದ ಸಮೀಪದ ವೈನ್ ಶಾಪ್ ಬಳಿ ಸೋಮವಾರ ಸಂಜೆ ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ಉಪ್ಪರಡ್ಕ ನಿವಾಸಿ ಬಾಲಕೃಷ್ಣ ಆಚಾರ್ಯ (69) ಎಂಬವರು ಕುಸಿದು ಕುಳಿತಲ್ಲಿಯೇ ಮೃತಪಟ್ಟ ಘಟನೆ ಸಂಭವಿಸಿದೆ.
ಸ್ಥಳೀಯರು ವೈನ್ ಶಾಪ್ ಸಮೀಪ ವೃದ್ಧರೊಬ್ಬರು ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿ ಮಾಹಿತಿ ನೀಡಿದ್ದು ಪರಿಶೀಲನೆ ನಡೆಸಿದಾಗ ಅವರು ಮೃತಪಟ್ಟಿರುವುದು ತಿಳಿದುಬಂದಿದೆ. ಮೃತರ ಶರ್ಟ್‌ನ ಕಿಸೆಯಲ್ಲಿ ಪತ್ತೆಯಾದ ಆಧಾರ್ ಕಾರ್ಡ್ ಆಧರಿಸಿ ಅವರ ಗುರುತನ್ನು ಬಾಲಕೃಷ್ಣ ಆಚಾರ್ಯ ಎಂದು ಪತ್ತೆಹಚ್ಚಲಾಯಿತು.
ಬಳಿಕ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಬಾಲಕೃಷ್ಣ ಆಚಾರ್ಯ ಅವರು ಹಲವು ವರ್ಷಗಳಿಂದ ತಮ್ಮ ಮನೆಯ ಸಮೀಪವೇ ಶೆಡ್ ನಿರ್ಮಿಸಿಕೊಂಡು ಕಬ್ಬಿಣದ ಕಮ್ಮಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ದುಡಿಯುವ ವ್ಯಕ್ತಿಯಾಗಿ ಪರಿಚಿತರಾಗಿದ್ದ ಅವರು, ಇತ್ತೀಚೆಗೆ ಪತ್ನಿಯ ನಿಧನದ ಬಳಿಕ ಮಾನಸಿಕವಾಗಿ ಕುಗ್ಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇಂದು ಅವರು ಆಸ್ಪತ್ರೆಗೆ ಹೋಗಲು ಬೆಳ್ತಂಗಡಿಗೆ ಬಂದಿದ್ದರು ಎನ್ನಲಾಗಿದ್ದು ಅನಾರೋಗ್ಯ ಕಾಣಿಸಿಕೊಂಡು ಕುಸಿದು ಕುಳಿತವರು ಅಲ್ಲಿಯೇ ಮೃತಪಟ್ಟಿದ್ದಾರೆ ಹೃದಯಾಘಾತದಿಂದ ಅವರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಮೃತರು ಪುತ್ರ ಪುರುಷೋತ್ತಮ ಹಾಗೂ ಪುತ್ರಿಯರಾದ ಸುಜಾತ ಮತ್ತು ಸುನಂದ ಅವರನ್ನು ಅಗಲಿದ್ದಾರೆ.