Home ರಾಷ್ಟ್ರ/ರಾಜ್ಯ ಅಂತಾರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನಾಚರಣೆಯ ಅಂಗವಾಗಿರಾಜ್ಯದಾದ್ಯಂತ ಸ್ವಾಸ್ಥ್ಯ ಸಂಕಲ್ಪ ಕೈಗೊಂಡ 1.31 ಲಕ್ಷ ವಿದ್ಯಾರ್ಥಿಗಳು

ಅಂತಾರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನಾಚರಣೆಯ ಅಂಗವಾಗಿರಾಜ್ಯದಾದ್ಯಂತ ಸ್ವಾಸ್ಥ್ಯ ಸಂಕಲ್ಪ ಕೈಗೊಂಡ 1.31 ಲಕ್ಷ ವಿದ್ಯಾರ್ಥಿಗಳು

3
0

ಬೆಳ್ತಂಗಡಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯ ಪ್ರಯುಕ್ತ ರಾಜ್ಯದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆನ್‌ಲೈನ್ ಮೂಲಕ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು. ರಾಜ್ಯದ 1,281 ಶಾಲಾ-ಕಾಲೇಜುಗಳ 1,31,039 ವಿದ್ಯಾರ್ಥಿಗಳು ಏಕಕಾಲದಲ್ಲಿ ಆನ್‌ಲೈನ್ ಮೂಲಕ ಮಾಹಿತಿಯನ್ನು ಪಡೆದರು.
‘ಯುವಜನತೆ ನಮ್ಮ ದೇಶದ ಆಸ್ತಿ. ಅವರು ದುಶ್ಚಟಗಳ ಮೊರೆ ಹೋಗದಂತೆ ಜಾಗೃತೆವಹಿಸಬೇಕಾದ ಅಗತ್ಯತೆ ಇಂದು ನಮ್ಮೆದುರಿಗಿದೆ. ಪಂಚೇಂದ್ರಿಯಗಳು ಆಕರ್ಷಿಸುತ್ತವೆ. ಆದರೆ ಅವುಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಾದ ಕರ್ತವ್ಯ ನಮ್ಮದು. ಪ್ರಜ್ಞಾಪೂರ್ವಕವಾಗಿ ತಪ್ಪುಗಳಾಗದಂತೆ ಜಾಗೃತೆವಹಿಸಬೇಕು. ದುಶ್ಚಟಗಳು ನಮ್ಮ ಬದುಕನ್ನು ಹಾಳು ಮಾಡುತ್ತವೆ. ಕೆಟ್ಟದ್ದನ್ನು ತಿರಸ್ಕರಿಸುವ ಮನೋಭಾವ ನಮ್ಮಲ್ಲಿರಬೇಕು. ದುಶ್ಚಟಗಳಿಂದ ದೂರವಿದ್ದಲ್ಲಿ ಸುಂದರ ಬದುಕು ನಮ್ಮೆದುರಿಗಿದೆ. ಇವುಗಳು ತನ್ನನ್ನು ಮಾತ್ರ ಕೆಡಿಸುವುದಲ್ಲದೆ ಸಮಾಜವನ್ನೇ ಕೆಡಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ದಾರಿತಪ್ಪದೆ ಸದಾ ಎಚ್ಚರಿಕೆಯಿಂದ ಇರಬೇಕು’ ಎಂದು ಡಾ. ಹೆಗ್ಗಡೆಯವರು ಮಾರ್ಗದರ್ಶನ ನೀಡಿದರು.
ಹೇಮಾವತಿ ವೀ. ಹೆಗ್ಗಡೆಯವರು ಮಾತನಾಡಿ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಬೆಂಗಳೂರಿನ ನಾರಾಯಣ ಹೃದಯಾಲಯದ ಅಧ್ಯಕ್ಷರು ಭಾರತದ ಪ್ರಸಿದ್ಧ ಹೃದಯ ಚಿಕಿತ್ಸಕರಾದ ಡಾ| ದೇವಿಪ್ರಸಾದ್ ಶೆಟ್ಟಿಯವರು ‘ಯುವ ಸಮುದಾಯ ತಮ್ಮ ಜಾಗೃತ ಮನಸ್ಸನ್ನು ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಉಪಯೋಗಿಸಬೇಕು. ಅವರು ಯಾವುದೇ ಮಾದಕ ವ್ಯಸನಕ್ಕೆ ಬಲಿಯಾಗದೆ ದೇಶದ ಸಂಪನ್ಮೂಲ ವ್ಯಕ್ತಿಗಳಾಗಿ ಜನಸೇವೆ, ಸಮಾಜಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ಈ ಸಮಾಜವನ್ನು ಕಾಪಾಡಬೇಕು’ ಎಂದು ಮಾರ್ಗದರ್ಶನ ನೀಡಿದರು.
ಬೆಂಗಳೂರಿನ ಪೊಲೀಸ್ ವರಿಷ್ಠಾಧಿಕಾರಿ ಡಾ. ಹೆಚ್. ಎನ್. ವೆಂಕಟೇಶ ಪ್ರಸನ್ನ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾದಕ ವಸ್ತುಗಳ ಬಳಕೆ, ದುರ್ಬಳಕೆ, ದುಷ್ಪರಿಣಾಮಗಳು, ಎದುರಿಸಬೇಕಾದ ಕಾನೂನುಕ್ರಮ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಎಸ್.ಎಸ್.ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಯೋಜನೆಯ ಟ್ರಸ್ಟಿಗಳಾದ ಡಾ| ಹರೀಶ್ ಕೃಷ್ಣ ಸ್ವಾಮಿ, ಮುಖ್ಯ ಹಣಕಾಸು ಅಧಿಕಾರಿಗಳಾದ ಶಾಂತಾರಾಮ್ ಆರ್. ಪೈ, ಪ್ರಾದೇಶಿಕ ನಿರ್ದೇಕರಾದ ಡಿ. ಜಯರಾಮ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here