Home ಅಂಕಣಗಳು ವಿದ್ವತ್ ಪಿಯು ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಸಿಎ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ

ವಿದ್ವತ್ ಪಿಯು ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಸಿಎ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ

5
0

ಬೆಳ್ತಂಗಡಿ, ಜೂ.26: ಪರಿಶ್ರಮ ಹಾಗೂ ಪರಿವರ್ತನೆಯಿಂದ ನೀವು ಅಂದುಕೊಂಡ ಗುರಿ ನಿಮ್ಮೆಡೆಗೇ ಸಾಗಿ ಬರಬಹುದು. ಸಿಎ ಓದುವ ಹಂತದಲ್ಲಿ ನಿಖರ ಹಾಗೂ ನಿರಂತರ ಅಭ್ಯಾಸ ಬಹಳ ಮುಖ್ಯವಾಗಿದೆ. ಪಠ್ಯ ಅಧ್ಯಯನ, ಸೂಕ್ತ ಮಾರ್ಗದರ್ಶನ, ಅವೆಲ್ಲಕ್ಕಿಂತ ಮಿಗಿಲಾಗಿ ಸಂಶೋಧನಾತ್ಮಕ ಅಭ್ಯಾಸ ಅತ್ಯಗತ್ಯವಾಗಿದೆ ಎಂದು ಯುವ ಲೆಕ್ಕ ಪರಿಶೋಧಕಿ (ಸಿಎ) ನಿರೀಕ್ಷಾ ನಾವರ ಅಭಿಪ್ರಾಯ ಪಟ್ಟರು.

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಸಿಎ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜೂ.25 ರಂದು ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಲ್ಲರೂ ಸಿಎ ಪರೀಕ್ಷೆ ಅತ್ಯಂತ ಕ್ಲಿಷ್ಟಕರ ಎಂಬ ಮಾತು ಹೇಳುತ್ತಾರೆ. ಆದರೆ ನಾನು ಕಂಡುಕೊಂಡಂತೆ ಸಿಎ ಪರೀಕ್ಷೆ ಕುರಿತು ಸುಧೀರ್ಘ ತಯಾರಿ ನಡೆಸಿದಲ್ಲಿ ಭವಿಷ್ಯದಲ್ಲಿ ನೀವು ಅಂದುಕೊಂಡ ಹಾದಿ ಸುಗಮವಾಗಿಸಬಹುದು. ಈ ನೆಲೆಯಲ್ಲಿ ನಮ್ಮ ಸುತ್ತಮುತ್ತ ಸೂಕ್ತ ಮನಸ್ಥಿತಿ, ಸಮರ್ಪಕ ಸಿದ್ಧತೆ ಹಾಗೂ ಸರಿಯಾದ ವ್ಯಕ್ತಿಗಳು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಸಾಧನೆ ವೇದಿಕೆ ಕಲ್ಪಿಸುವಲ್ಲಿ ವಿದ್ವತ್ ಎಲ್ಲ ರೀತಿಯ ಶೈಕ್ಷಣಿಕ ಉತ್ತೇಜನವನ್ನು ನೀಡುತ್ತಿದೆ. ಅದನ್ನು ಸದ್ಭಳಸಿಕೊಳ್ಳುವುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ. ಅವಕಾಶಗಳು ನಮ್ಮನ್ನು ಅರಸಿ ಬರುವುದಿಲ್ಲ, ಅವುಗಳನ್ನು ಅರಸಿ ನಾವುಗಳು ಅದಕ್ಕೆ ತಕ್ಕ ಪೂರ್ವತಯಾರಿ ನಡೆಸಬೇಕು ಎಂದು ಸಲಹೆ ನೀಡಿದರು.

ಶೈಕ್ಷಣಿಕ ನಿರ್ದೇಶಕ ಗಂಗಾಧರ್ ಇ.ಎಂ. ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಆಪ್ತ ಸಮಾಲೋಚನೆ ನಡೆಸುವ ಮಾಡೆಲ್ ಕಾಲೇಜು ದ.ಕ. ಜಿಲ್ಲೆಯಲ್ಲಿ ಇದ್ದರೆ ಅದು ವಿದ್ವತ್ ಪಿಯು ಕಾಲೇಜು ಮಾತ್ರ. ಪ್ರತಿಯೊಬ್ಬರು ತಮ್ಮದೇ ಕಾರ್ಯಪ್ರವೃತ್ತಿಯಲ್ಲಿ ತಲ್ಲೀನರಾಗಿರುತ್ತಾರೆ. ಆದರೆ ವಿಚಾರ, ವಿಷಯಗಳು ಬೇರೆಯಾಗಿರುತ್ತವೆಯಷ್ಟೆ. ಕೆಟ್ಟ ಹವ್ಯಾಸಗಳತ್ತ ಆಕರ್ಷಣೆಗೊಳ್ಳದೆ, ಧನಾತ್ಮಕ ವಿಚಾರಗಳತ್ತ ಆಕರ್ಷಿತರಾದರೆ ನಿರೀಕ್ಷಾ ನಾವರ ಅವರಂತೆ ನೀವು ಸಾಧನೆ ಮಾಡಿ ನಿಮ್ಮ ಊರಿಗೆ, ದೇಶಕ್ಕೆ, ಹೆತ್ತವರಿಗೆ ಹೆಸರು ತರುವಿರಿ ಎಂದು ಕಿವಿಮಾತು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಪ್ರಜ್ವಲ್ ರೈ, ಟ್ರಸ್ಟಿ ಕಾಶಿನಾಥ್ ಎಂ.ಕೆ., ಆಡಳಿತಾಧಿಕಾರಿ ಅಶೋಕ್ ಶೆಟ್ಟಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಹಾಗೂ ಕಾರ್ಯಕ್ರಮ ಸಂಯೋಜಕಿ ಡಾ.ಮಹಿತಾ ಉಪಸ್ಥಿತರಿದ್ದರು.

ವಿದ್ಯಾರ್ಥಿ ಸ್ಪಂದನ್ ಶೆಟ್ಟಿ ಸ್ವಾಗತಿಸಿದರು. ಮೈಲಾರ್ ಕಾಳಿಂಗೇಶ್ವರ್ ಚಿಳ್ಳಾಲೆ ಅತಿಥಿ ಪರಿಚಯ ಮಾಡಿದರು. ಬುವಿ ಎಸ್.ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here