Home ರಾಜಕೀಯ ಸಮಾಚಾರ ಅಡಿಕೆ ಬೆಳೆಗಾರರು ಮತ್ತು ವರ್ತಕರ ಮೇಲೆ ನಿರಂತರ ದೌರ್ಜನ್ಯ: SDPI ಖಂಡನೆ; ಮಹಾರಾಷ್ಟ್ರದಲ್ಲಿ ತಡೆಹಿಡಿದಿರುವ ರಾಜ್ಯದ...

ಅಡಿಕೆ ಬೆಳೆಗಾರರು ಮತ್ತು ವರ್ತಕರ ಮೇಲೆ ನಿರಂತರ ದೌರ್ಜನ್ಯ: SDPI ಖಂಡನೆ; ಮಹಾರಾಷ್ಟ್ರದಲ್ಲಿ ತಡೆಹಿಡಿದಿರುವ ರಾಜ್ಯದ ಲಾರಿಗಳ ಬಿಡುಗಡೆಗೆ ಆಗ್ರಹ 

3
0

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಡಿಕೆ ಬೆಳೆಗಾರರು ಹಾಗೂ ವರ್ತಕರು ಕಳೆದ ಹಲವು ವರ್ಷಗಳಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದೀಗ ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಾಣಿಕೆಯ ಲಾರಿಗಳನ್ನು ತಡೆಹಿಡಿದಿರುವ ಕ್ರಮವು ಅತೀಹೇಯಾ ಹಾಗೂ ಖಂಡನೀಯ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ ಇನಾಸ್ ರೋಡ್ರಿಗಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಡಿಕೆ ವರ್ತಕರು ಅತೀ ದೊಡ್ಡಮಟ್ಟದಲ್ಲಿ GST ಕಟ್ಟುವ ಮೂಲಕ ಸರ್ಕಾರಕ್ಕೆ ತೆರಿಗೆ ಪಾವತಿಯನ್ನು ಮಾಡುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಈ ನಿಲುವಿನಿಂದ ಕರ್ನಾಟಕ ರಾಜ್ಯ ಹಾಗೂ ಕೇಂದ್ರದ ಬೊಕ್ಕಸಕ್ಕೂ ಪೆಟ್ಟು ಬಿದ್ದಂತಾಗಿದೆ. ಅಡಿಕೆ ಕೃಷಿಕರು ಈಗಾಗಲೇ ಎಲೆಚುಕ್ಕಿ ರೋಗ, ಹಳದಿ ರೋಗ ಮತ್ತು ಪದೇಪದೇ ಉಂಟಾಗುವ ಬೆಲೆ ಕುಸಿತದಿಂದ ತೀವ್ರ ಸಂಕಷ್ಟದಲ್ಲಿದ್ದಾರೆ. ಇದರೊಂದಿಗೆ ವರ್ತಕರು ಪ್ರತಿನಿತ್ಯ ವಾಣಿಜ್ಯ ತೆರಿಗೆ ಅಧಿಕಾರಿಗಳ ಉಪಟಳವನ್ನು ಎದುರಿಸುತ್ತಿದ್ದಾರೆ. ಅಡಿಕೆ ಸಾಗಾಣಿಕೆ ಮಾಡುವಾಗ ಬಿಲ್‌ನಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳಿಗೂ ದಂಡದ ಹೆಸರಿನಲ್ಲಿ ದೊಡ್ಡ ಮೊತ್ತದ ಹಣವನ್ನು ವಸೂಲಿ ಮಾಡಲಾಗುತ್ತಿದೆ. ಅದಲ್ಲದೇ ಅಂಗಡಿಗಳು ಹಾಗೂ ಗಾರ್ಬಲ್ ಗಳಿಗೆ ದಾಳಿ ಮಾಡಿ ಕಿರುಕುಳ ನೀಡುವ ಘಟನೆಗಳು ನಡೆಯುತ್ತಿದೆ. ದಾಳಿ ಮಾಡುವ ಮೊದಲು ಕನಿಷ್ಠ ನೋಟೀಸ್ ನೀಡುವುದು ಕೂಡ ಬಾರಿ ಕಡಿಮೆ. ಅಷ್ಟೇ ಅಲ್ಲದೆ, ಅಡಿಕೆ ಮಾರಾಟ ಮಾಡಿದ ನಂತರ ಉತ್ತರ ಭಾರತದ ಕೆಲವು ವರ್ತಕರು ಹಣ ಪಾವತಿಸದೆ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣಗಳು ನಡೆದಿವೆ. ವರ್ತಕರು ಭಯದಿಂದಲೆ ವ್ಯವಹಾರ ಮಾಡುವಂತಾಗಿದೆ. ಈ ಸಂಕಷ್ಟಗಳ ಮಧ್ಯೆ, ಈಗ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯು ‘ಚೋಗರು’ ಬಣ್ಣವನ್ನು ಕೃತಕ ರಾಸಾಯನಿಕ ಎಂದು ತಪ್ಪಾಗಿ ಬಿಂಬಿಸಿ, 50ಕ್ಕೂ ಹೆಚ್ಚು ಲಾರಿಗಳನ್ನು ತಡೆಹಿಡಿದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಧಿಕೃತ ದಾಖಲೆಗಳಿದ್ದರೂ ತಪಾಸಣೆಯ ನೆಪದಲ್ಲಿ ದಿನಗಟ್ಟಲೆ ಕಿರುಕುಳ ನೀಡುವುದು ಕಾನೂನುಬಾಹಿರ. ವರ್ತಕರು ಮಹಾರಾಷ್ಟ್ರ ರಾಜ್ಯಕ್ಕೆ ತಮ್ಮ ಅಡಿಕೆಯನ್ನು ಕಳಿಸದೆ ಉಳಿದ ರಾಜ್ಯಕ್ಕೆ ಈ ರಾಜ್ಯದ ಮೂಲಕ ಕಳಿಸುವಾಗ ಅಲ್ಲಿ ತಡೆಗಟ್ಟಿ ಸೀಝ್ ಮಾಡುವುದು ಕಾನೂನು ಬಾಹಿರವಾಗಿದೆ. ಹಾಗೂ ಇದು ಕೊಲ್ಲಿ ರಾಷ್ಟ್ರಗಳಿಂದ ತೈಲವನ್ನು ಹಾರ್ಮುಝ್ ಜಲ ಸಂದಿಯಲ್ಲಿ ಸಾಗಣೆ ಮಾಡುವಾಗ ತಡೆಗಟ್ಟಿದ ವಾತಾವರಣದಂತೆ ಸಮಸ್ಯೆ ಸೃಷ್ಟಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಅಡಿಕೆ ಸಾಗಾಟ ಮಾಡುವ ಟ್ರಾನ್ಸ್‌ಪೋರ್ಟ್‌ ಸಂಸ್ಥೆಯವರು ಸಾಗಾಟವನ್ನು ನಿಲ್ಲಿಸಿದ್ದಾರೆ. ವರ್ತಕರು ಖರೀದಿಸಿದರೆ ಸಾಗಾಟ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ತಮ್ಮೊಂದಿಗೆ ಬೆಂಬಲವಾಗಿ ನಿಂತಿರುವ ಕೃಷಿಕರಿಗೆ ಕಷ್ಟ ಆಗಬಾರದು ಎಂಬ ನಿಟ್ಟಿನಲ್ಲಿ ಇಲ್ಲಿಯ ತನಕ ವರ್ತಕರು ಖರೀದಿಯನ್ನು ನಿಲ್ಲಿಸಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ವರ್ತಕರು ಕೂಡ ಅನಿವಾರ್ಯವಾಗಿ ಅಂಗಡಿ ಹಾಗೂ ಗಾರ್ಬಲ್ ಗಳನ್ನು ಬಂದ್ ಮಾಡಬೇಕಾಗುತ್ತದೆ. ಇದರಿಂದ ಕೃಷಿಕರಿಗೆ, ಸಾವಿರಾರು ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿ ದಿನದೂಡಲು ಕೂಡ ಕಷ್ಟಪಡುವ ಪರಿಸ್ಥಿತಿ ನಿರ್ಮಾಣ ವಾಗಬಹುದು.

ಈ ಗಂಭೀರ ವಿಷಯದಲ್ಲಿ ಜಿಲ್ಲೆಯ ಸಂಸದರ ಆಡಳಿತಾತ್ಮಕ ವೈಫಲ್ಯ ಎದ್ದು ಕಾಣುತ್ತಿದೆ. ಮಹಾರಾಷ್ಟ್ರದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ, ಆಡಳಿತ ಪಕ್ಷದೊಂದಿಗೆ ಸಂವಹನ ನಡೆಸಿ ಸಮಸ್ಯೆಯನ್ನು ಪರಿಹರಿಸಲು ಸಂಸದರು ವಿಫಲರಾಗಿದ್ದಾರೆ. ಕರ್ನಾಟಕದಿಂದ ಆಯ್ಕೆಯಾಗಿರುವ 17 ಮಂದಿ ಬಿಜೆಪಿ ಸಂಸದರು ಈ ವಿಷಯದಲ್ಲಿ ಯಾವುದೇ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ. ರೈತರ ಮತ ಪಡೆದವರು ಇದೀಗ ಬೆಳೆಗಾರರಿಗೆ ಮತ್ತು ವರ್ತಕರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಇನಾಸ್ ರೋಡ್ರಿಗಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆರೆಯ ರಾಜ್ಯಗಳೊಂದಿಗೆ ಉತ್ತಮ ವ್ಯಾಪಾರ ಸಂಬಂಧವನ್ನು ಹೊಂದಿರುವಾಗ, ಇಂತಹ ಕಿರುಕುಳ ನೀಡುವುದು ಒಕ್ಕೂಟ ವ್ಯವಸ್ಥೆಯ ತತ್ವಕ್ಕೆ ವಿರುದ್ಧವಾಗಿದೆ. ಈ ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ, ತಡೆಹಿಡಿಯಲಾದ ಲಾರಿಗಳನ್ನು ಬಿಡುಗಡೆಗೊಳಿಸಬೇಕು ಮತ್ತು ಅಡಿಕೆ ಸಾಗಾಣಿಕೆಗೆ ಸುಗಮ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದಲ್ಲಿ, ಕೃಷಿಕರ ಮತ್ತು ವರ್ತಕರ ಹಿತದೃಷ್ಟಿಯಿಂದ ಎಸ್ ಡಿ ಪಿ ಐ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here