ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಚಂದ್ರಶೇಖರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಅತ್ಯಂತ ಗಂಭೀರ ಮತ್ತು ಖಂಡನೀಯ ಸಂಗತಿಯಾಗಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಕ್ಷೇತ್ರ ಸಮಿತಿ ಅಧ್ಯಕ್ಷೆ ಶಮಾ ಉಜಿರೆ ತಿಳಿಸಿದ್ದಾರೆ.
ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರ ಸುರಕ್ಷತೆ ಮತ್ತು ಘನತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂತಹ ಸ್ಥಳಗಳಲ್ಲಿ ಮಹಿಳೆಯರಿಗೆ ಕಿರುಕುಳ, ಬೆದರಿಕೆ ಅಥವಾ ಮಾನಸಿಕ ಹಿಂಸೆ ಉಂಟಾಗುವಂತಹ ಘಟನೆಗಳು ನಡೆಯುತ್ತಿರುವುದು ಸಮಾಜದ ತಲೆ ತಗ್ಗಿಸುವ ವಿಷಯವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ನಡೆಸಿ, ಸತ್ಯಾಸತ್ಯತೆಗಳನ್ನು ಹೊರತೆಗೆದು ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ, ದೂರು ನೀಡಿದ ಮಹಿಳಾ ಸಿಬ್ಬಂದಿಗೆ ಅಗತ್ಯ ರಕ್ಷಣೆ ಹಾಗೂ ನ್ಯಾಯ ಒದಗಿಸಬೇಕು.
ಈ ಪ್ರಕರಣವು ಮಹಿಳೆಯರ ಕೆಲಸದ ಸ್ಥಳದಲ್ಲಿನ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಆಸ್ಪತ್ರೆ ಆಡಳಿತ ಮತ್ತು ಆರೋಗ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಮಾ ಉಜಿರೆ ಆಗ್ರಹಿಸಿದ್ದಾರೆ.










