ಬೆಳ್ತಂಗಡಿ: ಯುವಕನೋರ್ವ ಚಿಕ್ಕಪ್ಪನನ್ನೇ ಬಿಯರ್ ಬಾಟ್ಲಿಯಿಂದ ಇರಿದು ಕೊಲೆಗೈದ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ರವಿವಾರ ರಾತ್ರಿ ಸಂಭವಿಸಿದೆ.
ಇಲ್ಲಿನ ನಿವಾಸಿ ಮಧುಸೂಧನ ( 38) ಅವರು ಮೃತಪಟ್ಟವರಾಗಿದ್ದು, ಅವರ ಅಣ್ಣ ಕೇಶವ ಪೂಜಾರಿ ಅವರ ಪುತ್ರ ರಾಹುಲ್ (23) ಕೊಲೆಗೈದ ಆರೋಪಿಯಾಗಿದ್ದಾನೆ.
ಘಟನೆಯ ವಿವರ: ಕೇಶವ ಪೂಜಾರಿ ಅವರ ಮನೆಯಲ್ಲಿ ರವಿವಾರ ರಾತ್ರಿ ದೈವಕ್ಕೆ ತಂಬಿಲ ಕಾರ್ಯಕ್ರಮ ನಡೆಯುತ್ತಿತ್ತು. ರಾಹುಲ್ ಮತ್ತಿತರರು ಮನೆಯಿಂದ ಹೊರಗೆ ಕುಡಿದು ಗದ್ದಲ ಮಾಡುತ್ತಿದ್ದರು.ಇದನ್ನು ಆಕ್ಷೇಪಿಸಿದ ಮಧುಸೂದನ್ ಅವರನ್ನು ರಾಹುಲ್ ಕೋಪದಿಂದ ಬಿಯರ್ ಬಾಟಲ್ ನಿಂದ ಕುತ್ತಿಗೆಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ಮಧುಸೂದನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು.
ಮೃತರು ಅವಿವಾಹಿತರಾಗಿದ್ದು, ಇಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿದ್ದರು. ರಾಹುಲ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದ್ದು, ಪುಂಜಾಲಕಟ್ಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
