ಬೆಳ್ತಂಗಡಿ : ಏಳು ಜನರ ವಿದ್ಯಾರ್ಥಿಗಳ ತಂಡ ನದಿಯಲ್ಲಿ ಈಜಲು ಹೋಗಿ ಓರ್ವ ಇಂಜಿನಿಯರಿಂಗ್ ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪಜಿರಡ್ಕ ದೇವಸ್ಥಾನದ ಸಮೀಪ ನೇತ್ರಾವತಿ ನದಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಪಜಿರಡ್ಕದ ನೇತ್ರಾವತಿ ನದಿಯಲ್ಲಿ ಮೇ.19 ರಂದು ಸಂಜೆ 4 ಗಂಟೆ ಸುಮಾರಿಗೆ ಏಳು ಸ್ನೇಹಿತರ ತಂಡ ಈಜಲು ಹೋಗಿ ಓರ್ವ ಬೆಳ್ತಂಗಡಿ ತಾಲೂಕಿನ ಉಜಿರೆ ಖಾಸಗಿ ಕಾಲೇಜಿನ ಅಂತಿಮ ವರ್ಷದ ಇಂಜಿನಿಯರಿಂಗ್(ಈಸಿಎ) ವಿದ್ಯಾರ್ಥಿ ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ನಿವಾಸಿ ಶ್ರೀಪೂರ್ಣ(21) ಎಂಬಾತ ನೀರುಪಾಲಾಗಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ತಿಳಿದು ಕೂಡಲೇ ನದಿಯಲ್ಲಿ ಯುವಕನ ಮೃತದೇಹ ಪತ್ತೆಗಾಗಿ ಸ್ಥಳೀಯರು ಕಾರ್ಯಾಚರಣೆ ಆರಂಭಿಸಿದ್ದರು
ಘಟನಾ ಸ್ಥಳಕ್ಕೆ ಸ್ಥಳೀಯರು,ಅಗ್ನಿಶಾಮಕ ದಳ, ಶೌರ್ಯ ವಿಪತ್ತು ಪಡೆ ಆಗಮಿಸಿ ರಾತ್ರಿ ಕಾರ್ಯಾಚರಣೆ ನಡೆಸಿದ್ದು 9.30 ರ ಸುಮಾರಿಗೆ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ ಆರ್ ಗಾಣಿಗೇರ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
