Home ಶಾಲಾ ಕಾಲೇಜು ಎಪ್ರಿಲ್  6,7 ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಎರಡು ದಿನಗಳ ಬೃಹತ್‌ ಉದ್ಯೋಗ ಮೇಳ “SDM ಉದ್ಯೋಗಂ...

ಎಪ್ರಿಲ್  6,7 ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಎರಡು ದಿನಗಳ ಬೃಹತ್‌ ಉದ್ಯೋಗ ಮೇಳ “SDM ಉದ್ಯೋಗಂ 2026”

0

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಇದರ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜು ಸಹಯೋಗದಲ್ಲಿ ಉಜಿರೆಯಲ್ಲಿ ಎಪ್ರಿಲ್ 6 ಮತ್ತು 7 ರಂದು ‘ಎಸ್‌ಡಿಎಂ ಉದ್ಯೋಗಂ 2026’ ಬೃಹತ್ ಉದ್ಯೋಗ ಮೇಳ ನಡೆಯಲಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಅವರು ಕಾಲೇಜಿನಲ್ಲಿ ಎಪ್ರಿಲ್ 2ರಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.ಉದ್ಯೋಗ ಮೇಳದಲ್ಲಿ ಈಗಾಗಲೇ 100ಕ್ಕೂ ಅಧಿಕ ಕಂಪನಿಗಳು ನೊಂದಾಯಿಸಿಕೊಂಡಿದ್ದು; ಒಟ್ಟು 4,000 ಕ್ಕೂ ಅಧಿಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಲುವಾಗಿ ಅಭ್ಯರ್ಥಿಗಳ ಸಂದರ್ಶನ ನಡೆಸಲಿವೆ. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಬೆಳಗ್ಗೆ 9-30ರಿಂದ ಬೃಹತ್ ಉದ್ಯೋಗ ಮೇಳ ಆರಂಭವಾಗಲಿದ್ದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಸಮೂಹ ಆಯೋಜಿಸಿರುವ ಉದ್ಯೋಗ ಮೇಳದಲ್ಲಿ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಉಚಿತವಾಗಿ ನೋಂದಣಿ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರುಐಟಿ ಮತ್ತು ಸಾಪ್ಟ್‌ವೇರ್ ಡೆವಲಪ್‌ಮೆಂಟ್, ಫಾರ್ಮಾಸ್ಯೂಟಿಕಲ್ಸ್, ಬ್ಯಾಂಕಿಂಗ್ ಮತ್ತು ಫಿನ್ಯಾನ್ಸ್, ಐಟಿ ಮತ್ತು ಐಟಿಇಎಸ್, ಸೇಲ್ಸ್ ಮತ್ತು ಮಾರ್ಕೆಟಿಂಗ್, ರೀಟೈಲ್ ಮತ್ತು ಸೇಲ್ಸ್, ಶಿಕ್ಷಣ, ಪ್ರವಾಸೋದ್ಯಮ ಮತ್ತು ಆತಿಥ್ಯ, ಅಕೌಂಟಿಂಗ್ ಮತ್ತು ಟ್ಯಾಕ್ಸ್ ಕನ್ಸಲ್ಟೆನ್ಸಿ, ಉತ್ಪಾದನೆ, ಅಟೋಮೊಬೈಲ್, ಟೆಲಿಕಾಂ ಮತ್ತು ಮೀಡಿಯಾ, ಕನ್‌ಸ್ಟ್ರಕ್ಷನ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಹಾಗೂ ಫಿನಾನ್ಶಿಯಲ್ ಕನ್‌ಸಲ್ಟೆನ್ಸಿ ಸೇರಿದಂತೆ ಹಲವು ವರ್ಗಗಳಿಗೆ ಸಂಬಂಧಿಸಿದ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು; ಉದ್ಯೋಗಾಕಾಂಕ್ಷಿಗಳಿಗೆ ವಿಸ್ತೃತ ಆಯ್ಕೆಯ ಅವಕಾಶವನ್ನು ಒದಗಿಸಿವೆ.ಪಿಯುಸಿ, ಬಿಎ, ಬಿಬಿಎ, ಬಿಕಾಂ, ಬಿಸಿಎ, ಬಿಎಸ್ಸಿ, ಬಿವೋಕ್, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್, ಬಿಟೆಕ್, ಬಿಎಡ್, ಎಂಎ, ಎಂಸಿಜೆ, ಎಂಎಸ್‌ಡಬ್ಲ್ಯು, ಎಂಕಾಂ, ಎಂಸಿಎ, ಎಂಎಸ್ಸಿ, ಎಂಬಿಎ, ಮತ್ತು ಜಿಎನ್‌ಎಂ ನರ್ಸಿಂಗ್ ಸೇರಿದಂತೆ ಯಾವುದೇ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಕೂಡಾ ‘ಎಸ್‌ಡಿಎಂ ಉದ್ಯೋಗಂ-2026’ದಲ್ಲಿ ಭಾಗವಹಿಸಬಹುದಾಗಿದ್ದು, ಇದರ ಜೊತೆಗೆ ತಾಲೂಕಿನಾದ್ಯಂತವಿರುವ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಂತಿಮ ಪದವಿ ಹಂತದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೂ ಪಾಲ್ಗೊಳ್ಳುವ ಮುಕ್ತ ಅವಕಾಶ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ನೊಂದಾಯಿಸಿಕೊಳ್ಳುವ ಸಲುವಾಗಿ ಗೂಗಲ್ ಫಾರ್ಮ್ ಲಿಂಕ್ ಸೃಷ್ಟಿಸಿದ್ದು, ಅದರ ಮೂಲಕ ಮೂರು ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಈಗಾಗಲೇ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಸಂಪೂರ್ಣ ಉದ್ಯೋಗ ಮೇಳದ ನೊಂದಣಿ ಮತ್ತು ಆಯ್ಕೆ ಪ್ರಕ್ರಿಯೆಯನ್ನು ಪೇಪರ್ ರಹಿತವಾಗಿಸಿದ್ದು, ಆನ್‌ಲೈನ್ ಮೂಲಕವೇ ಎಲ್ಲಾ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಎಸ್‌ಡಿಎಂ ಉದ್ಯೋಗ ಮೇಳಂ ಸಲುವಾಗಿ ವಿಶೇಷ ಸಾಪ್ಟ್‌ವೇರ್ ರೂಪಿಸಲಾಗಿದ್ದು, ಅದರ ಮೂಲಕ ಸಂದರ್ಶನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳಿಗೆ ತಮ್ಮ ಸಂದರ್ಶನದ ಫಲಿತಾಂಶವನ್ನು ಮೊಬೈಲ್ ಮೂಲಕವೇ ತಿಳಿದುಕೊಳ್ಳುವಂತಹ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು ಪ್ರಥಮ ಬಾರಿಗೆ ಇಂತಹ ಉದ್ಯೋಗ ಮೇಳ ಆಯೋಜಿಸಿದ್ದು; ಎರಡು ದಿನಗಳ ಬೃಹತ್ ಉದ್ಯೋಗ ಮೇಳದಲ್ಲಿ ಉದ್ಯೋಗಾಕಾಂಕ್ಷಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕೆಂದು ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ವಿನಂತಿಸಿದರು.ಗೋಷ್ಟಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಪ್ರಾಂಶುಪಾಲ ಸಂತೋಷ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿ ಕಾಲೇಜಿನ ಪ್ರಾಂಶುಪಾಲರ ಪ್ರತಿನಿಧಿ ಗಿರೀಶ್ ಕುಮಾರ್, ಸುಬ್ರಹ್ಮಣ್ಯ ತೋಳ್ಪಾಡಿತ್ತಾಯ, ಅಮರೇಶ್ ಹೆಬ್ಬಾರ್, ಡಾ. ನಾಗರಾಜ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಸುನಿಲ್ ಹೆಗ್ಡೆ ಸ್ವಾಗತಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version