ಓರ್ವನ
ಬೆಳ್ತಂಗಡಿ : ಕ್ರಿಕೆಟ್ ಆಡುವ ಸಂದರ್ಭದಲ್ಲಿ ನಡೆದ ವಾಗ್ವಾದವನ್ನು ನೆಪವಾಗಿಸಿ ಯುವಕನ ತಲೆಗೆ ಕತ್ತಿಯಿಂದ ಕಡಿದು ಗಾಯಗೊಳಿಸಿ ಕೊಲೆಗೆ ಯತ್ನಿಸಿದ ಘಟನೆ ಮಾ.29 ರಂದು ಸಂಜೆಯ ವೇಳೆ ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿ ನಡೆದಿದ್ದು ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕಕ್ಕೇನ ನಿವಾಸಿ ಆಸಿಫ್ (36) ಎಂಬವರೇ ಗಾಯಗೊಂಡವರಾಗಿದ್ದು ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ನಿವಾಸಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು ರಜೆಯಲ್ಲಿ ಬಂದಿದ್ದ ಲಾಯಿಲ ಗ್ರಾಮದ ಕಕ್ಕೇನ ನಿವಾಸಿ ಆರೀಫ್ (25) ಎಂಬಾತನೇ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಆರೋಪಿಯಾಗಿದ್ದಾನೆ. ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಮಾ.30 ರಂದು ಬಂಧಿಸಿದ್ದಾರೆ.
ಘಟನೆಯ ಹಿನ್ನಲೆ: ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಹಕ್ಕೀಂ ಎಂಬವರಿಗೆ ಸೇರಿದ ಖಾಸಗಿ ಜಾಗದಲ್ಲಿ ಸ್ಥಳೀಯ ಯುವಕರು ಕ್ರಿಕೆಟ್ ಆಡುತ್ತಿದ್ದರು ಈ ವೇಳೆ ಆರೋಪಿ ಆರೀಫ್ ಕೂಡ ಇವರೊಂದಿಗಿದ್ದು ಮಾ 27 ರಂದು ಕ್ರಿಕೆಟ್ ಆಡುವ ವೇಳೆ ಸ್ಥಳೀಯ ನಿವಾಸಿ ರಿಯಾಜ್ ಯಾನೆ ಅಶ್ರಫ್ ಎಂಬಾತನೊಂದಿಗೆ ಆರಿಫ್ ಜಗಳ ಮಾಡಿದ್ದು ಈ ವೇಳೆ ಆಸಿಫ್ ಜಗಳ ಬಿಡಿಸಿದ್ದ ಇದೇ ವಿಚಾರವಾಗಿ ರಾತ್ರಿ ಆರಿಫ್ ಬೆದರಿಕೆ ಮೆಸೇಜ್ ಹಾಕಿದ್ದ ಎನ್ನಲಾಗಿದೆ ಈ ಬಗ್ಗೆ ಮಾ.29 ರಂದು ಕ್ರಿಕೆಟ್ ಆಡಲು ಬಂದ ವೇಳೆ ಆಸಿಫ್ ಪ್ರಶ್ನಿಸಿದ್ದಾನೆ ಈ ವೇಳೆ ಇವರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಆರೀಫ್ ನೇರ ಮನೆಗೆ ಹೋಗಿದ್ದು ಸಂಜೆ 5:30 ರ ಸುಮಾರಿಗೆ ಮನೆಯಿಂದ ಕತ್ತಿಯೊಂದಿಗೆ ಬಂದಿದ್ದಾನೆ. ಈತ ಕತ್ತಿಯೊಂದಿಗೆ ಬರುವುದನ್ನು ನೋಡಿ ಭಯಗೊಂಡ ಆಸಿಫ್ ಅಲ್ಲಿಂದ ಓಡಿದ್ದಾನೆ ಆದರೆ ಬೆನ್ನಟ್ಟಿ ಬಂದ ಆರೋಪಿ ಕತ್ತಿಯಿಂದ ಕೊಲ್ಲುವ ಉದ್ದೇಶದಿಂದ ತಲೆಗೆ ಕಡಿದಿದು ಗಾಯಗೊಳಿಸಿ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಈ ವೇಳೆ ಇತರರು ಅಲ್ಲಿಗೆ ಬಂದಿದ್ದು ಅವರನ್ನು ನೋಡಿ ಆರೀಫ್ ಕತ್ತಿಯೊಂದಿಗೆ ಓಡಿ ಹೋಗಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿ ಆರೀಫ್ ವಿರುದ್ದ ಕಲಂ 352,351(3),109ಬಿ.ಎನ್.ಎಸ್ ನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
