ನೆಲ್ಯಾಡಿ: ಗ್ರೀನ್ ಸಿಟಿ – ಕ್ಲೀನ್ ಸಿಟಿ ಅಭಿಯಾನದ ಅಂಗವಾಗಿ ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದ ಸೀರೋಮಲಬಾರ್ ಯೂತ್ ಮೂವ್ಮೆಂಟ್ (SMYM) ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಯಿತು.
ಹೈವೇ ನಿರ್ಮಾಣ, ಕಿರಿದಾದ ರಸ್ತೆಗಳು ಮತ್ತು ಬೀದಿಗಳಲ್ಲಿ ತುಂಬಿಕೊಂಡಿದ್ದ ಕಸದ ರಾಶಿಗಳಿಂದ ನೆಲ್ಯಾಡಿ ಪೇಟೆ ಅಸ್ವಚ್ಛತೆಯ ಸಮಸ್ಯೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಸಮಾಜಕ್ಕೆ ಮಾದರಿಯಾಗುವ ಉದ್ದೇಶದಿಂದ ಪೇಟೆಯ ಇಕ್ಕೆಲಗಳಲ್ಲಿ ಸಂಗ್ರಹವಾಗಿದ್ದ ಕಸವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಕಾರ್ಯವನ್ನು ಯುವಕರು ಕೈಗೊಂಡರು.
ಈ ಕಾರ್ಯಕ್ರಮವನ್ನು ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನ ಧರ್ಮಗುರು ವಂದನೀಯ ಫಾ. ಶಾಜಿ ಮಾತ್ಯು ಅವರ ಉಪಸ್ಥಿತಿಯಲ್ಲಿ ಯೂತ್ ಮೂವ್ಮೆಂಟ್ ಅಧ್ಯಕ್ಷರಾದ ಶ್ರೀ ತೋಮಸ್ ವಾಯಯಿಲ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಚರ್ಚ್ ಟ್ರಸ್ಟಿಗಳಾದ ರೆಜಿ ಕೊಳಂಗರಾತ್, ಜೋನ್ಸನ್ ಪುಳಿಕ್ಕಲ್, ರಾಜೇಶ್ ತೆಕ್ಕನಾಟ್, ಜೋಯ್ ಪುತ್ತೇನ್ ಪರಂಭಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಫಾ. ಶಾಜಿ ಮಾತ್ಯು ಅವರು, “ಪೇಟೆಯ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ. ವರ್ತಕರು, ಸಾರ್ವಜನಿಕರು, ಗ್ರಾಹಕರು ಹಾಗೂ ಸ್ಥಳೀಯ ಗ್ರಾಮಾಡಳಿತ ಎಲ್ಲರೂ ಕೈಜೋಡಿಸಿದಾಗ ಮಾತ್ರ ಪೇಟೆಯನ್ನು ಶಾಶ್ವತವಾಗಿ ಸ್ವಚ್ಛವಾಗಿರಿಸಲು ಸಾಧ್ಯ,” ಎಂದು ತಿಳಿಸಿದರು.
ಈ ಸ್ವಚ್ಛತಾ ಅಭಿಯಾನದಲ್ಲಿ ಸೀರೋಮಲಬಾರ್ ಯೂತ್ ಮೂವ್ಮೆಂಟ್‌ನ ಯುವಕರು ಉತ್ಸಾಹದಿಂದ ಭಾಗವಹಿಸಿದರು.
