
ಬೆಳ್ತಂಗಡಿ; ತಾಲೂಕಿನ ಉಜಿರೆ ಗ್ರಾಮದ ಸ.ನಂಬ್ರ 406/1 ರ ಸರಕಾರಿ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದ ಉಜಿರೆ ಗ್ರಾಮದ ಕಕ್ಕರೆಬೆಟ್ಟು ನಿವಾಸಿ ರಾಜೀವಿ ಎಂಬವರ ಮನೆಯನ್ನು ಸ್ಥಳೀಯ ಓಡಲ ನಿವಾಸಿ ರಫೀಕ್ ಎಂಬಾತ ಸಂಪೂರ್ಣವಾಗಿ ಕೆಡವಿ ಮನೆಯ ಸೊತ್ತುಗಳನ್ನು ಬೀದಿಗೆಸೆದಿದ್ದು ಇದರ ವಿಡಿಯೋ ಮಾಡಿದ ಬಾಲಕಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿ ರಫೀಕ್ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಫೆ.27 ರಂದು ರಾಜೀವಿ ಮತ್ತು ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ರಫೀಕ್ ಎಂಬಾತ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಮನಗಂಡು ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಮನೆಯನ್ನು ಸಂಪೂರ್ಣವಾಗಿ ನಾಶಪಡಿಸಿದ್ದಲ್ಲದೆ ಮನೆಯಲ್ಲಿದ್ದ ಟಿ.ವಿ. ಫ್ರಿಡ್ಜ್, ಗ್ಯಾಸ್ ಸಿಲಿಂಡರ್, ಪೀಠೋಪಕರಣಗಳು, ಬಟ್ಟೆ ಬರೆ, ದಿನಸಿ ಸಾಮಾನು ಇನ್ನಿತ್ಯಾದಿ ಎಲ್ಲಾ ವಸ್ತುಗಳನ್ನು ಮನೆಯಿಂದ ತೆಗೆದು ಬೀದಿಗೆ ಎಸೆದಿದ್ದಾನೆ. ಈ ಅಕ್ರಮ ಕೆಲಸವನ್ನು ವಿಡಿಯೋ ರೆಕಾರ್ಡಿಂಗ್ ಮಾಡಲು ಹೋದ ಬಾಲಕಿ ಮೇಲೆ
“ನೀನು ಏನಾದರೂ ದೂರನ್ನು ನೀಡಿದರೆ ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಒಡ್ಡಿದ್ದ,
ಮನೆಯನ್ನು ಸಂಪೂರ್ಣ ಹಾಳುಗೆಡವ ಲಾಗಿದ್ದು
ಇದರಿಂದಾಗಿ ಸುಮಾರು 10 ಲಕ್ಷ ರೂ. ಗಳಷ್ಟು ನಷ್ಟ ಉಂಟಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು.
ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಯ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ 329(4), 324(5), 351(2), 352 ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.








