ಬೆಳ್ತಂಗಡಿ : ಅಂಗಳಕ್ಕೆ ನಾಯಿ ತಂದು ಹಾಕಿದ ಚೆಂಡಿನಂಥ ವಸ್ತುವನ್ನು
ಸ್ಫೋಟಕವೆಂದು ಗೊತ್ತಿಲ್ಲದೆ
ಬಾಲ್ ಎಂದು ಭ್ರಮಿಸಿ ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಭಯಂಕರ ಸದ್ದಿನಲ್ಲಿ ಸ್ಫೋಟಗೊಂಡು
ಬಾಲಕ ಗಾಯಗೊಂಡ ಘಟನೆ ಸಂಭವಿಸಿದ ಮನೆಗೆ ಧರ್ಮಸ್ಥಳ ಪೊಲೀಸರು ಮತ್ತು ಸೋಕೋ ತಂಡ ಹಾಗೂ
ಬಾಂಬ್ ಸ್ಕ್ಯಾಡ್ ಭೇಟಿ ನೀಡಿ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬಲಿಪೆ ನಿವಾಸಿ ಮುಕುಂದ ಮತ್ತು ಜಯಶ್ರೀ ದಂಪತಿಯ ಪುತ್ರ ಅಭೀಶ್ (11) ಎಂಬಾತ ಮನೆಯಂಗಳದಲ್ಲಿ ಬುಧವಾರ ಸಂಜೆ ಸಂಭವಿಸಿದ ಅವಘಡದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡ ಸದೃಶವಾಗಿ ಪಾರಾಗಿದ್ದ.
ಸ್ಫೋಟಗೊಂಡ ಮನೆಗೆ
ಧರ್ಮಸ್ಥಳ ಎಸ್ ಐ ಸಮರ್ಥ್ ಗಾಣಿಗೇರ್,
ಸೋಕೋ ವಿಭಾಗದ ಸುಮಂತ್, ಆಶಿಫ್ ಅವರುಗಳನ್ನೊಳಗೊಂಡ
ಪೊಲೀಸರ ತಂಡ ಗುರುವಾರ
ಸಂಜೆ ಭೇಟಿ ನೀಡಿ ಮನೆಯವರಿಂದ ಘಟನೆಯ ಮಾಹಿತಿ ಪಡೆದಿದ್ದಾರೆ. ಬಾಂಬ್ ಸ್ಕಾಡ್ ತಂಡದವರು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ ಸ್ಫೋಟಕದ ಅವಶೇಷ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.









