
ಬೆಳ್ತಂಗಡಿ: ಬೆಳ್ತಂಗಡಿ ಕಸಬಾ ಗ್ರಾಮದ ಚರ್ಚ್ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರೋಷನ್ ಕಿರಣ್ ಡಿಸೋಜ(೩೬) ಅವರು ನಾಪತ್ತೆಯಾಗಿರುವ ಕುರಿತು ಅವರ ಪತ್ನಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬೆಳ್ತಂಗಡಿಯ ಸಿಕ್ವೇರಾ ಟ್ರಾವೆಲ್ಸ್‌ನ ಪಿಕಪ್‌ನಲ್ಲಿ ಚಾಲಕ ಕೆಲಸ ಮಾಡಿಕೊಂಡಿದ್ದ ರೋಷನ್ ಡಿಸೋಜ ಅವರು ಜ.24ರಂದು ತನ್ನ ಪತ್ನಿಗೆ ಕರೆ ಮಾಡಿ ಜ.25ರಂದು ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದರು.
25 ರಂದು ಬೆಳಿಗ್ಗೆ ಬಸ್ ಹತ್ತಿ ಬರುತ್ತಿರುವುದಾಗಿ ತಿಳಿಸಿದ್ದ ಅವರು ನಂತರ ಪತ್ನಿಗೆ ಕರೆ ಮಾಡಿಲ್ಲ. ಪತ್ನಿ 4 ಗಂಟೆಗೆ ಕರೆ ಮಾಡಿದಾಗ ರೋಷನ್ ಕಿರಣ್ ಡಿಸೋಜ ಅವರು ಕರೆ ಸ್ವೀಕರಿಸಿಲ್ಲ. ನಂತರ ರೋಷನ್ ಕಿರಣ್ ಡಿಸೋಜರವರು ಪತ್ನಿಯ ಮೊಬೈಲ್‌ಗೆ ನಾನು ಇರುವುದಿಲ್ಲ ಎಂದು ವಾಟ್ಸಾಪ್ ಮೆಸೇಜ್ ಮಾಡಿದ್ದಾರೆ.
ಇದರಿಂದ ಆತಂಕಗೊಂಡ ಪತ್ನಿ ರೋಷನ್ ಅವರ ಮೊಬೈಲ್‌ಗೆ ದೂರವಾಣಿ ಕರೆ ಮಾಡಿದಾಗ ಸ್ವೀಕರಿಸಿಲ್ಲ. ಇದರಿಂದ ಗಾಬರಿಗೊಂಡ ಪತ್ನಿ ನೆರೆಯ ಪರಿಚಯಸ್ಥರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.
ಕೂಡಲೇ ಬೆಂಗಳೂರಿನಿಂದ ಹೊರಟು ಬೆಳ್ತಂಗಡಿಯ ಬಾಡಿಗೆ ಮನೆಗೆ ಬಂದು ನೋಡಿದಾಗ ರೋಷನ್ ಕಿರಣ್ ಡಿಸೋಜ ಅವರು ಮನೆಯಲ್ಲಿ ಇರಲಿಲ್ಲ. ಆದ್ದರಿಂದ ಕಾಣೆಯಾದ ರೋಷನ್ ಕಿರಣ್ ಅವರನ್ನು ಪತ್ತೆಹಚ್ಚಿ ಕೊಡಬೇಕು ಎಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಅವರ ಪತ್ನಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ. ಕಾಣೆಯಾದ ಸಿದ್ದಕಟ್ಟೆಯ ಕುಕ್ಕಿಪಾಡಿ ಗ್ರಾಮದ ಮಾವಿನಕಟ್ಟೆಯ ದೇವಸ್ಯ ಮನೆಯ ಮಾರ್ಷಲ್ ಡಿಸೋಜ ಅವರ ಪುತ್ರ ರೋಷನ್ ಕಿರಣ್ ಡಿಸೋಜ ಅವರ ಮಾಹಿತಿ ಇದ್ದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.








