
ಬೆಂಗಳೂರು: ರಾಜ್ಯದಲ್ಲಿ ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸುವಂತೆ ಸರ್ಕಾರ ಆದೇಶಿಸಿದೆ. ಈ ಮೂಲಕ ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯ್ತಿಗಳಲ್ಲಿ ಇನ್ಮುಂದೆ ಆಡಳಿತಾಧಿಕಾರಿಯು ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪೀಠಾಧಿಕಾರಿ ತುರ್ತು ಆದೇಶವನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹೊರಡಿಸಿದ್ದಾರೆ. ಅದರಲ್ಲಿ ಸಂವಿಧಾನದ ಅನುಚ್ಛೇಧ 243-E ಉಪಬಂಧದನ್ವಯ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 41 ಹಾಗೂ 42 ರಲ್ಲಿ ಉಪಬಂಧಿಸಿರುವಂತೆ ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಂತೆ ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರ ಅವಧಿಯು, ಅವುಗಳ ಮೊದಲ ಸಭೆಗಾಗಿ ಗೊತ್ತುಪಡಿಸಿದ ದಿನಾಂಕದಿಂದ 5 ವರ್ಷಗಳ ಅವಧಿಯವರೆಗೆ ಅಸ್ತಿತ್ವದಲ್ಲಿದ್ದು, 5 ವರ್ಷಗಳು ಮುಗಿದ ನಂತರದ ದಿನಾಂಕದಿಂದ ಗ್ರಾಮ ಪಂಚಾಯಿತಿಯ ಅವಧಿಯು ಮುಕ್ತಾಯಗೊಳ್ಳಲಿದೆ. ಈ ಹಿಂದ 2020-2025 ನೇ ಸಾಲಿಗೆ ರಚಿತವಾಗಿದ್ದ ರಾಜ್ಯದ ಗ್ರಾಮ ಪಂಚಾಯಿತಿಗಳ ಅವಧಿಯು 2026ನೇ ಜನವರಿ, ಫೆಬ್ರವರಿ, ಮಾರ್ಚ್ ಹಾಗೂ ಮುಂದಿನ ತಿಂಗಳುಗಳ ವಿವಿಧ ದಿನಾಂಕಗಳಂದು ಮುಕ್ತಾಯಗೊಳ್ಳುತ್ತವೆ ಎಂದಿದ್ದಾರೆ.
2026-2031ರ ಅವಧಿಗಾಗಿ ಈ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯುವ ದಿನಾಂಕದವರೆಗೆ ಸದರಿ ಗ್ರಾಮ ಪಂಚಾಯಿತಿಗಳಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 8(iii) ರನ್ವಯ ಜಿಲ್ಲಾಧಿಕಾರಿಗಳು, ಆಡಳಿತಾಧಿಕಾರಿಗಳನ್ನು ನೇಮಿಸಲು ಅವಕಾಶವಿರುತ್ತದೆ. ಇದರನ್ವಯ ಜಿಲ್ಲಾಧಿಕಾರಿಗಳು ಸಂಬಂಧ ಪಟ್ಟ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ರಚನೆಯಾಗಿರುವ ಹಾಗೂ ಮುಕ್ತಾಯಗೊಂಡಿರುವ ದಿನಾಂಕಗಳನ್ನು ಪಡೆದು ಪರಿಶೀಲಿಸಿ, ಗ್ರಾಮ ಪಂಚಾಯಿತಿಗಳು ಮುಕ್ತಾಯಗೊಳ್ಳಲಿರುವ ದಿನಾಂಕದ ಮುಂದಿನ ದಿನಾಂಕದಿಂದ ಜಾರಿಗೆ ಬರುವಂತ ಆಡಳಿತಾಧಿಕಾರಿಗಳನ್ನು ನೇಮಿಸಿ ಅಧಿಸೂಚಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದಿದ್ದಾರೆ.