
ಮಂಗಳೂರು: ಗಾಂಜಾ ದಾಸ್ತಾನಿರಿಸಿದ್ದ ಆರೋಪದಲ್ಲಿ ಸುರತ್ಕಲ್ ಪೊಲೀಸರು ಇಬ್ಬರನ್ನು ಬಂಧಿಸಿ, 21 ಕೆಜಿ 450 ಗ್ರಾಂ ಗಾಂಜಾವನ್ನು ಶನಿವಾರ ಚೊಕ್ಕಬೆಟ್ಟು, ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಉಳಾಯಿಬೆಟ್ಟು ಗ್ರಾಮದ ಪ್ರದೀಪ್ ಪೂಜಾರಿ (32), ಬೈಕಂಪಾಡಿ ಚಿತ್ರಾಪುರ ನಿವಾಸಿ ವಸಂತ (42) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರಿಂದ ಅಂದಾಜು 10,72,500 ರೂ. ಮೌಲ್ಯದ 21.450 ಕೆಜಿ ಗಾಂಜಾ, 7 ಸಾವಿರ ರೂ. ಮೌಲ್ಯದ ಮೂರು ಮೊಬೈಲ್
ಫೋನ್ ಗಳು, ಸಾಗಾಟಕ್ಕೆ ಬಳಸಿದ್ದ 3 ಲಕ್ಷ ರೂ. ಮೌಲ್ಯದ ಕಾರು, ಗಾಂಜಾ ತುಂಬಿಸಿಟ್ಟಿದ್ದ ಮೂರು ಸಾವಿರ ರೂ. ಮೌಲ್ಯದ 3 ಲಗೇಜ್ ಬ್ಯಾಗ್ ಗಳು, ಗಾಂಜಾ ಸೇವಿಸಲು ಬಳಸುವ 2 ಸ್ಟ್ರಿಪ್ಸ್ ಹಾಗೂ 1 ಸಾವಿರ ರೂ. ನಗದು ಸೇರಿ ಒಟ್ಟು 13,86,500 ರೂ. ಮೊತ್ತದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಸುರತ್ಕಲ್ ಚೊಕ್ಕಬೆಟ್ಟು ಗ್ರಾಮದ ಪರಮೇಶ್ವರಿ ನಗರದ ಬೆನಕ ಎಂಬ ಮನೆಯಲ್ಲಿ ಮಾರಾಟ ಮಾಡುವ ಸಲುವಾಗಿ ಗಾಂಜಾ ಶೇಖರಿಸಿಟ್ಟಿರುವ ಕುರಿತು ಖಚಿತ ಮಾಹಿತಿ ಆಧರಿಸಿ ಪೊಲೀಸರು ಶನಿವಾರ ದಾಳಿ ಮಾಡಿ ಪ್ರಕರಣವನ್ನು ಭೇದಿಸಿದ್ದಾರೆ.
ಆರೋಪಿಗಳು ಹೊಸ ವರ್ಷಾಚರಣೆಗೆ ಮಾರಾಟ ಮಾಡಲು ಒಡಿಶಾದಿಂದ ಡಿ.29ರಂದು ತಂದು ಚೊಕ್ಕಬೆಟ್ಟುವಿನ ಮನೆಯಲ್ಲಿ ದಾಸ್ತಾನಿರಿಸಿದ್ದರು. ಪೊಲೀಸ್ ಬಂದೋಬಸ್ತ್ ಹೆಚ್ಚಾಗಿದ್ದ ಕಾರಣ ಮಾರಾಟ ಮಾಡಲಾಗದೇ ಅದನ್ನು ಕಾರಿನಲ್ಲೇ ಇಟ್ಟಿರುವುದಾಗಿ ಬಂಧಿತರು ತಿಳಿಸಿದ್ದಾರೆ
ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ. 01/2026 ಕಲಂ: 8(C), 20(b)(ii), (C) ಎನ್.ಡಿಪಿಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ಪ್ರದೀಪ್ ಪೂಜಾರಿ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಎರಡು, ಬರ್ಕೆ, ಬೆಳ್ತಂಗಡಿ, ಧರ್ಮಸ್ಥಳ, ಮುಲ್ಕಿ, ಸುರತ್ಕಲ್, ಮಂಗಳೂರು ಉತ್ತರ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.