
ಬೆಳ್ತಂಗಡಿ : ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸಾರ್ವಜಿನಿಕರಿಂದ ಹಾಗೂ ಗ್ರಾ.ಪಂ ಸದಸ್ಯರುಗಳಿಂದ ಬಂದ ಆರೋಪಗಳ ಹಿನ್ನಲೆಯಲ್ಲಿ ಸಭೆಯಲ್ಲಿ ಶಾಸಕರು ನೀಡಿದ ಸೂಚನೆಯಂತೆ ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಶ್ರೀನಿವಾಸ್ ಡಿ.ಪಿ ಅವರನ್ನು ಬೆಳ್ತಂಗಡಿ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್ ಅವರು ಡಿ.30 ರಂದು ವರ್ಗಾವಣೆ ಮಾಡಿದ್ದಾರೆ.
ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಸಮಯಗಳಿಂದ ಅಕ್ರಮ ಕಟ್ಟಡಗಳು ಯಾವುದೇ ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಕಾರ್ಯಚರಿಸುತ್ತಿದ್ದು ಇದಕ್ಕೆ ಸಾರ್ವಜನಿಕರು ದೂರು ನೀಡಿದ್ರೂ ಕಾನೂನು ಕ್ರಮ ಕೈಗೊಳ್ಳದೆ ಇದ್ದಾರೆ ಎಂಬ ಗಂಭಿರ ಆರೋಪ ಜನಸ್ಪಂದನ ಸಭೆಯಲ್ಲಿ ಕೇಳಿ ಬಂದಿತ್ತು.
ಜನಸ್ಪಂದನ ಸಭೆಯ ನಡಾವಳಿಯನ್ನು ಉಲ್ಲೇಖಿಸಿ ಇದೀಗ ಅವರಿಗೆ ಇದ್ದ ಲಾಯಿಲ ಗ್ರಾಮಪಂಚಾಯತಿನ ಪ್ರಭಾರ ಜವಾಬ್ದಾರಿಯನ್ನು ತೆಗೆದು ಹಾಕಿ ಮಡಂತ್ಯಾರು ಗ್ರಾಮಪಂಚಾಯತಿನ ಪಿಡಿಒ ಆಗಿ ನೇಮಿಸಲಾಗಿದೆ.
ಕೊಯ್ಯೂರು ಗ್ರಾಮ ಪಂಚಾಯತ್ ನಲ್ಲಿ ಎ- ಗ್ರೇಡ್ ಕಾರ್ಯದರ್ಶಿಯಾಗಿದ್ದ ತಾರಾನಾಥ್ ಅವರನ್ನು ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಪ್ರಭಾರ ಹುದ್ದೆಗೆ ನೇಮಕ ಮಾಡಲಾಗಿದೆ. ಕೊಯ್ಯೂರು ಗ್ರಾಮ ಪಂಚಾಯತ್ ಗೆ ಕೊಕ್ಕಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಮೇಶ್ವರ್ ಅವರನ್ನು ನೇಮಕ ಮಾಡಿ ಬೆಳ್ತಂಗಡಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಅವರು ಆದೇಶ ಮಾಡಿದ್ದಾರೆ.










