
ಮಂಗಳೂರು: ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ 2022 ರಲ್ಲಿ ನಡೆದ ಪತ್ನಿಯಿಂದ ಪತಿ ಹತ್ಯೆ ಪ್ರಕರಣದ ತೀರ್ಪು ಡಿ.23 ರಂದು ಹೊರಬಿದ್ದಿದೆ. ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ -೧ (ಪೋಕ್ರೋ) ದ ನ್ಯಾಯಾಧೀಶರಾದ ಮೋಹನ ಜೆ.ಎಸ್. ಅವರು ಆರೋಪಿ ನಲ್ಲಮ್ಮ ಯಾನೆ ಎಲಿಯಮ್ಮ(56) ಅವರನ್ನು ಅಪರಾಧಿಕ ಹೊಣೆಯಿಂದ ಮುಕ್ತಗೊಳಿಸಿದ್ದಾರೆ.
ಪ್ರಕರಣ: ದಿನಾಂಕ 05-07-2022 ರಂದು ಬೆಳಿಗ್ಗೆ 5:30 ಕ್ಕೆ ನಾವೂರು ಮನೆಯಲ್ಲಿ ಪತಿ ಯೋಹಾನನ್(72) ಅವರನ್ನು ಎಲಿಯಮ್ಮ(56) ಕತ್ತಿಯಿಂದ ಕಡಿದು ಕೊಲೆ ಮಾಡಿದ್ದರು. ಬಳಿಕ ಆರೋಪಿ ಎಲಿಯಮ್ಮ ನನ್ನು ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ಮತ್ತು ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಿತ್ತು.
ಪ್ರಮುಖ ಅಂಶಗಳು ವಿಚಾರಣೆ ವೇಳೆ ಆರೋಪಿ “ತಾನು ಕೊಂದಿರುವುದು ಹೌದು” ಎಂದು ಒಪ್ಪಿಕೊಂಡಿದ್ದರು. ಆದರೂ ನ್ಯಾಯಾಲಯ ಪೂರ್ಣ ಸಾಕ್ಷಿ ವಿಚಾರಣೆ ನಡೆಸಿತ್ತು. ಅಭಿಯೋಜನೆ ಪರ ಸಾಕ್ಷಿಗಳು ಕೃತ್ಯವನ್ನು ದೃಢಪಡಿಸಿದ್ದರು. ಆದರೆ ಅಂತಿಮವಾಗಿ ಆರೋಪಿ ಪರ ವಕೀಲ ವಿಕ್ರಮ್ ರಾಜ್ ಎ. ಅವರು ನಡೆಸಿದ ಕ್ರಾಸ್ ಎಕ್ಸಾಮಿನೇಷನ್‌ನಲ್ಲಿ “Delusional Disorder” o ជួយ ಎಂಬುದು ಸಾಬೀತಾಯಿತು. “ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣ ಆಕೆಗೆ ತಾನು ಮಾಡುತ್ತಿರುವ ಕೃತ್ಯ ತಪ್ಪು ಎಂಬ ಅರಿವು ಇರಲಿಲ್ಲ. ಆದ್ದರಿಂದ ಆಕೆ ಅಪರಾಧ ಎಸಗಿಲ್ಲ” ಎಂದು ವಕೀಲರು ವಾದಿಸಿದ್ದರು. ಈ ವಾದವನ್ನು ಮನ್ನಿಸಿದ ನ್ಯಾಯಾಧೀಶರಾದ ಮೋಹನ ಜೆ.ಎಸ್ ಡಿ.23 ರಂದು ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದ್ದಾರೆ.
ಎಲಿಯಮ್ಮ ಗಂಡನನ್ನು ಕೊಂದಿರುವುದು ಸಾಬೀತಾಗಿದೆ. ಆದರೆ ಆಕೆ ಮಾನಸಿಕ ಅಸ್ವಸ್ಥರಾಗಿದ್ದರಿಂದ ಅಪರಾಧಿಕ ಹೊಣೆ ಇಲ್ಲ ಎಂದು ತೀರ್ಪು ನೀಡಿದ್ದಾರೆ. ತೀರ್ಪಿನ ಅನ್ವಯ, ಜೈಲು ಅಧೀಕ್ಷಕರು ಆರೋಪಿಯನ್ನು ನಿಮ್ಹಾನ್ಸ್‌ಗೆ (NIMHANS) ಕಳುಹಿಸಿ, ಆಕೆ ಬಿಡುಗಡೆಗೆ ಯೋಗ್ಯಳೇ ಮತ್ತು ಆಕೆ ತನಗೆ ಅಥವಾ ಸಮಾಜಕ್ಕೆ ಅಪಾಯಕಾರಿಯೇ ಎಂಬ ಬಗ್ಗೆ ವರದಿ ಪಡೆಯುವಂತೆ ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣದಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್,ಸಬ್ ಇನ್ಸ್‌ಪೆಕ್ಟರ್ ನಂದ ಕುಮಾರ್ ಪ್ರಕರಣದ ತನಿಖೆ ನಡೆಸಿದ್ದರು. ಆರೋಪಿ ಪರವಾಗಿ ನ್ಯಾಯವಾದಿಗಳಾದ ವಿಕ್ರಮ್ ರಾಜ್ ಎ ಮತ್ತು ಜೀವನ್ ಎ.ಎಂ. ವಾದ ಮಂಡಿಸಿದ್ದರು.