

ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಆರೋಪಿಯಾಗಿ ಜೈಲು ಸೇರಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಕೋರ್ಟ್ ಜಾಮೀನು ನೀಡಿ ವಾರ ಕಳೆದರೂ ಬಿಡುಗಡೆ ಭಾಗ್ಯಮಾತ್ರ ಇನ್ನೂ ಸಿಕ್ಕಿಲ್ಲ. ನವೆಂಬರ್ 26ರಂದು ಚಿನ್ನಯ್ಯಗೆ ಮಂಗಳೂರು ನ್ಯಾಯಾಲಯದಿಂದ ಜಾಮೀನು ಮಂಜೂರು ಆಗಿತ್ತು. ಹತ್ತು ನಿಬಂಧನೆಗಳೊಂದಿಗೆ ಇಬ್ಬರು ಜಾಮೀನುದಾರರು, 1 ಲಕ್ಷ ಭದ್ರತೆ ಬಾಂಡ್ ನೀಡಲು ಕೋರ್ಟ್ ಆದೇಶಿಸಿತ್ತು. ಆದರೆ, ಯಾರೂ ಜಾಮೀನು ಮತ್ತು ಭದ್ರತೆ ಹಣ ಠೇವಣಿ ಮಾಡದ ಹಿನ್ನೆಲೆಯಲ್ಲಿ ಚಿನ್ನಯ್ಯ ಇನ್ನೂ ಶಿವಮೊಗ್ಗದ ಜೈಲಿನಲ್ಲಿಯೇ ಇರುವಂತಾಗಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಆರೋಪಿಸಿ ತಲೆಬುರುಡೆಯೊಂದಿಗೆ ನ್ಯಾಯಾಲಯಕ್ಕೆ ಬಂದಿದ್ದ ಚಿನ್ನಯ್ಯ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿ ತಾನು ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಕಾನೂನು ಬಾಹಿರವಾಗಿ ಹೂತು ಹಾಕಿದ್ದೇನೆ ಎಂದು ಹೇಳಿಕೆ ನೀಡಿದ್ದ ಆತನನ್ನು ಸಾಕ್ಷಿ ದೂರುದಾರ ಎಂದು ನ್ಯಾಯಾಲು ಪರಿಗಣಿಸಿತ್ತು. ಈತನ ಹೇಳಿಕೆಯ ಆಧಾರದಲ್ಲಿ ಎಸ್.ಐ.ಟಿಯನ್ನು ರಚಿಸಲಾಗಿತ್ತು ತನಿಖೆಯ ವೇಳೆ ಚಿನ್ನಯ್ಯ ಹೇಳಿದ್ದ ಹಲವು ಸ್ಥಳಗಳಲ್ಲಿ ಅಗೆದು ಪರೀಕ್ಷಿಸಲಾಗಿತ್ತು ಈ ನಡುವೆಯೇ ಚಿನ್ನಯ್ಯ ಹೆಳಿಕೆ ಬದಲಿಸಿ ತಾನು ಸುಳ್ಳು ಸಾಕ್ಷ್ಯ ಹೇಳಿರುವುದಾಗಿ ಎಸ್.ಐ.ಟಿ ಮುಂದೆ ಒಪ್ಪಿಕೊಂಡಿದ್ದ, ಅಲ್ಲದೆ ಆತನಿಗೆ ಬೆಂಬಲ ನೀಡಿದ್ದ ಸೌಜನ್ಯ ಪರ ಹೋರಾಟಗಾರರ ವಿರುದ್ದವೂ ಹೇಳಿಕೆ ನೀಡಿ ಇಡೀ ತನಿಖೆಯ ದಿಕ್ಕನ್ನು ಬದಲಿಸಿದ್ದ ಆತನ ಹೇಳಿಕೆಯ ಆಧಾರದ ಮೇಲೆಯೇ ಎಸ್.ಐ.ಟಿ ಚಿನ್ನಯ್ಯನನ್ನು ಬಂಧಿಸಿತ್ತು. ಇದಾದ ಬಳಿಕ ಚಿನ್ನಯ್ಯ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ತಂಡದಿಂದ ಹಾಗೂ ಆತನ ಪರವಾಗಿ ಬಂದಿದ್ದ ವಕೀಲರಿಂದ ದೂರವಾಗಿದ್ದು ತನಗೆ ವಕೀಲರನ್ನು ನೀಡುವಂತೆ ನ್ಯಾಯಾಲಯದಲ್ಲಿ ವಿನಂತಿಸಿಕೊಂಡಿದ್ದ ಅದರಂತೆ ಆತನಿಗೆ ನ್ಯಾಯಾಲಯವೇ ವಕೀಲರನ್ನು ನೇಮಕ ಮಾಡಿತ್ತು. ಚಿನ್ನಯ್ಯನ ಪರವಾಗಿ ಇವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು, ಎಸ್.ಐ.ಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿಯನ್ನು ನೀಡಿದ ಬೆನ್ನಲ್ಲಿಯೇ ನ್ಯಾಯಾಲಯ ಚಿನ್ನಯ್ಯ ನಿಗೆ ಜಾಮೀನು ನೀಡಿತ್ತು .









