ಬೆಳ್ತಂಗಡಿ; ಇಳಂತಿಲದಲ್ಲಿ ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತಿಸಿದ ಪ್ರಕರಣದಲ್ಲಿ ಮೂರು ಮಂದಿ ಆರೋಪಿಗಳಿಗೆ ಬೆಳ್ತಂಗಡಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪ ನೀಡಿದೆ.
2023ರ ಸೆಪ್ಟೆಂಬರ್ 2ರಂದು
ಬೆಳಗ್ಗೆ 10 ಗಂಟೆ ವೇಳೆಗೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ರಿಫಾಯಿನಗರದಲ್ಲಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಬಂಟ್ವಾಳ ತಾಲೂಕಿನ ಪೆರ್ನೆಯ ಸಲೀಂ ಹುಸೇನ್ ಮತ್ತು ಪೆರಾಜೆಯ ಶಹ್ಯಾಜ್ ಅಹಮ್ಮದ್ ಎಂಬವರನ್ನು ಉಪ್ಪಿನಂಗಡಿ ಎಸ್‌ಐ ಓಮನ ಎನ್.ಕೆ. ಮತ್ತು ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದರು.
ಈ ವೇಳೆ ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಸಲೀಂ ಹುಸೇನ್ ಮತ್ತು ಶಹ್ಯಾಜ್ ಅಹಮ್ಮದ್ ಹಾಗೂ ಅವರಿಗೆ ಗಾಂಜಾ ಸರಬರಾಜು ಮಾಡಿದ ಮಹಮ್ಮದ್ ಶಾಫಿ ಅಲಿಯಾಸ್ ಇಳಂತಿಲ ಶಾಫಿ ವಿರುದ್ಧ ಎನ್‌ಡಿಪಿಯಸ್ ಕಾಯ್ದೆಯಡಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ನಂತರ ತನಿಖೆ ಪೂರ್ಣಗೊಳಿಸಿದ ಎಸ್.ಐ. ರಾಜೇಶ್ ಕೆ.ವಿ.
ಅವರು ಆಪಾದಿತ ಮೂವರ ವಿರುದ್ಧ ಬೆಳ್ತಂಗಡಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮನು ಬಿ.ಕೆ.
ಅವರು ಇದೀಗ ತೀರ್ಪು ಪ್ರಕಟಿಸಿದ್ದು ಒಂದನೇ ಆರೋಪಿ ಸಲೀಂ ಹುಸೇನ್ ಮತ್ತು 2ನೇ ಆರೋಪಿ ಶಹ್ಯಾಜ್ ಅಹಮ್ಮದ್ ತಲಾ ಆರು ತಿಂಗಳು ಜೈಲು ಶಿಕ್ಷೆ.10 ಸಾವಿರ ರೂ ದಂಡ. ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳು ಹೆಚ್ಚುವರಿ ಶಿಕ್ಷೆ. 3ನೇ ಆರೋಪಿ ಮಹಮ್ಮದ್ ಶಾಫಿಗೆ ಒಂದು ವರ್ಷ ಕಠಿಣ ಶಿಕ್ಷೆ.10ಸಾವಿರ ರೂ ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 3 ತಿಂಗಳು ಹೆಚ್ಚುವರಿ ಶಿಕ್ಷೆ
ಅನುಭವಿಸುವಂತೆಯೂ ಆದೇಶದಲ್ಲಿ ನ್ಯಾಯಾಧೀಶರು ತಿಳಿಸಿದ್ದಾರೆ. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ವಾದ ಮಂಡಿಸಿದ್ದರು.









