Home ಸ್ಥಳೀಯ ಸಮಾಚಾರ ಡಾ ಹೆಗ್ಗಡೆಯವರ ರಾಜ್ಯ ಸಭಾ ನಿಧಿ 2 ಕೋಟಿ ಕಾಮಗಾರಿ ಶಿಲಾನ್ಯಾಸ-ಜನರ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯಸಭಾ...

ಡಾ ಹೆಗ್ಗಡೆಯವರ ರಾಜ್ಯ ಸಭಾ ನಿಧಿ 2 ಕೋಟಿ ಕಾಮಗಾರಿ ಶಿಲಾನ್ಯಾಸ-ಜನರ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯಸಭಾ ನಿಧಿ ಬಳಕೆ : ಡಾ ಹೆಗ್ಗಡೆ

0

ಬೆಳ್ತಂಗಡಿ: ಗ್ರಾಮದ ಅಗತ್ಯತೆ ಮತ್ತು ಗ್ರಾಮೀಣ ಜನರ ಜೀವನ ಸ್ಥಿತಿಗತಿ ಬಗ್ಗೆ ಗ್ರಾಮಾಭಿವೃದ್ದಿ ಯೋಜನೆ ಮೂಲಕ ನಿತ್ಯ ವರದಿ ಬರುತ್ತಿದ್ದು, ಇದರಂತೆ ಇಲ್ಲಿಂದ 800 ಕಿ.ಮೀ. ದೂರದ ಬೀದರ್ ಜಿಲ್ಲೆಯ ಸ್ಥಿತಿ ಕುರಿತು ಮಾಹಿತಿ ದೊರೆತ ಕಾರಣ ಅಲ್ಲಿಯ ಜನರ ಜೀವನ ಸುಧಾರಣೆ ಅಗಬೇಕು ಎಂದು ನನ್ನ ರಾಜ್ಯಸಭಾ ಪ್ರದೇಶಾಭಿವೃದ್ಧಿ
ನಿಧಿಯಿಂದ ಬೀದರ್ ಜಿಲ್ಲೆಗೆ ಹೈನುಗಾರಿಕೆಗೆ 10 ಕೋಟಿ ರೂ. ಬಳಕೆ ಮಾಡಿದ್ದು ಇದರಿಂದ ನಿತ್ಯ 18 ಸಾವಿರ ಲೀಟರ್ ಉತ್ಪತ್ತಿಯಾಗುತ್ತಿದ್ದ ಹಾಲು ಪ್ರಸ್ತುತ ಒಂದು ಲಕ್ಷದ ನಲುವತ್ತು ಸಾವಿರ ಲೀಟರ್ ಹಾಲು ಉತ್ಪತ್ತಿಯಾಗುತ್ತಿದೆ. ಇದರಿಂದ ಜನರ ಜೀವನ ಮಟ್ಟ ಸುಧಾರಣೆಯಾಗಿದೆ. ಇದೇ ರೀತಿ ಜನರ ಜೀವನ ಮಟ್ಟ ಸುಧಾರಣೆ ಅಗತ್ಯತೆ ಮನಗಂಡು ಮುಂದೆಯೂ ರಾಜ್ಯಸಭಾ ನಿಧಿ ಬಳಸಲಾಗುವುದು ಎಂದು ರಾಜ್ಯಸಭಾ ಸಂಸದ, ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಸೋಮವಾರ ರಾಜ್ಯಸಭಾ ಸಂಸದರಾದ ಡಾ.‌ ವೀರೇಂದ್ರ ಹೆಗ್ಗಡೆಯವರ ಪ್ರದೇಶಾಭಿವೃದ್ಧಿ ನಿಧಿಯಡಿ ಮಂಜೂರುಗೊಂಡಿರುವ ರೂ. 2 ಕೋ.ರೂ. ಅನುದಾನದಡಿ
ಬೆಳ್ತಂಗಡಿ ನಗರದ ಕೆಇಬಿ-ರೆಂಕೆದಗುತ್ತು-ಮಲ್ಲೊಟ್ಟು ಸಂಪರ್ಕಿಸುವ ರಸ್ತೆಯ ಅಗಲೀಕರಣ-ಡಾಂಬರೀಕರಣ ಮತ್ತು ಒಳಚರಂಡಿ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡುತ್ತಾ, ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ತಾಲೂಕಿನ ಕೆಲವು ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಗೆ ರಾಜ್ಯಸಭಾ ನಿಧಿಯನ್ನು ಬಳಸಲಾಗಿದೆ. ಗ್ರಾಮಾಭಿವೃದ್ದಿ ಯೋಜನೆಯಿಂದ ಸಾವಿರಾರು ಕುಟುಂಬಗಳಿಗೆ ಬೆಳಕು ಬಂದರೆ, ಸಿರಿ ಸಂಸ್ಥೆಯಿಂದ ಸಾವಿರಾರು ಮಂದಿಗೆ ಉದ್ಯೋಗ ದೊರಕಿದೆ. ಮುಂದೆಯೂ ಇನ್ನಷ್ಟು ಉತ್ಪನ್ನಗಳನ್ನು ತಯಾರಿಸಿ ಮೂರು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಸಿಗುವಂತೆ ಮಾಡಲಾಗುವುದು. ಇಲ್ಲಿನ ಶಾಸಕರ, ಪಟ್ಟಣ ಪಂಚಾಯಿತಿ ಅಧ್ಯಕ್ಷರ ,ಸದಸ್ಯರ ಬೇಡಿಕೆಯಂತೆ ಜನರ ಅನುಕೂಲಕ್ಕಾಗಿ ಈ ರಸ್ತೆಗೆ 2 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.
ಶಾಸಕ‌ ಹರೀಶ್ ಪೂಂಜ ಅವರು ಮಾತನಾಡಿ, ಡಾ ಹೆಗ್ಗಡೆಯವರು ತಮ್ಮ ರಾಜ್ಯಸಭಾ ನಿಧಿಯಡಿ ಬೆಳ್ತಂಗಡಿ ಅಯ್ಯಪ್ಪ ಮಂದಿರ ಬಳಿಯಿಂದ ಹುಣ್ಸೆಕಟ್ಟೆ ವರೆಗಿನ ರಸ್ತೆ ಅಭಿವೃದ್ದಿಗೆ 2 ಕೋಟಿ ರೂ. ನೀಡುವ ಮೂಲಕ ಈ ಪ್ರದೇಶದ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.

ಉಪ್ಪಿನಂಗಡಿ- ಬೆಳ್ತಂಗಡಿ ರಾಜ್ಯ ಹೆದ್ದಾರಿಯಲ್ಲಿ

ಗುರುವಾಯನಕರೆಯಲ್ಲಿ ಟ್ರಾಫಿಕ್ ಸಮಸ್ಯೆ ಬಂದಾಗ ಈ ಸಂಪರ್ಕ ರಸ್ತೆ ಸಾವಿರಾರು ಜನರಿಗೆ ಅನುಕೂಲವಾಗಿದೆ.

ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಡಾ ಹೆಗ್ಗಡೆಯವರು ತಮ್ಮ ರಾಜ್ಯಸಭಾ ನಿಧಿಯಿಂದ 10 ಕೋಟಿ ರೂ. ಅನುದಾನ ನೀಡಿ ಸಾವಿರಾರು ಕುಟುಂಬಗಳ ಆರ್ಥಿಕ ಬೆಳವಣಿಗೆ ಕಾರಣವಾಗಿದ್ದಾರೆ. ಇದರಿಂದ ದೇಶದಲ್ಲಿ ಸಂಸದರ ನಿಧಿ ವಿನಿಯೋಗ ಹೇಗೆ ಮಾಡಬಹುದೆಂದು ಡಾ. ಹೆಗ್ಗಡೆಯವರು ಕೆಲಸ ಮಾಡಿ ತೋರಿಸಿಕೊಟ್ಟು ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ, ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ,
ಧ. ಗ್ರಾ. ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್. ಎಸ್., ಸಿರಿ ಸಂಸ್ಥೆ ಟ್ರಸ್ಟಿ ರಾಜೇಶ್ ಪೈ ಉಜಿರೆ, ಪ.ಪಂ.‌ ಮುಖ್ಯಾಧಿಕಾರಿ ರಾಜೇಶ್, ಸಿರಿ ಸಂಸ್ಥೆ ಸಿಇಒ ಪ್ರಸನ್ನ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ಜನಾರ್ದನ್ ಪ್ರಸ್ತಾವಿಸಿ, ಸ್ವಾಗತಿಸಿದರು.
ಸಿರಿ ಗೋದಾಮು ವಿಭಾಗದ ಮ್ಯಾನೇಜರ್ ಜೀವನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version