ಬೆಳ್ತಂಗಡಿ; ದನ ಮಾರಾಟ ಮಾಡಿದ ಕಾರಣಕ್ಕೆ ಪಟ್ರಮೆ ಗ್ರಾಮದ ಪಟ್ಟೂರಿನಲ್ಲಿ ಮನೆ ಜಪ್ತಿ ಮಾಡಿದ ಘಟನೆಯಲ್ಲಿ ಧರ್ಮಸ್ಥಳ ಪೊಲೀಸರು ಕಾನೂನು ವ್ಯಾಪ್ತಿಯನ್ನು ಮೀರಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನಲೆಯಲ್ಲಿ ಸಾರಮ್ಮ ಅವರ ವಾಸದ ಮನೆಯನ್ನು ಕೂಡಲೇ ಬಿಡುಗಡೆ ಗೊಳಿಸುವಂತೆ ಪುತ್ತೂರು ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಅಕ್ರಮವಾಗಿ ಕಾರಿನಲ್ಲಿ ದನ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಧರ್ಮಸ್ಥಳ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಇದಾದ ಬಳಿಕ ಮುಂದುವರಿದ ಪೊಲೀಸರು ದನಗಳನ್ನು ವಧೆ ಮಾಡಲು ಉದ್ದೇಶಿಸಿದ್ದ ಆರೋಪಿಗಳ ಮನೆಯನ್ನು ಜಪ್ತಿ ಮಾಡಿದ್ದರು. ಇದಾದ ಬಳಿಕ ಇವರಿಗೆ ಕರುಗಳನ್ನು ಮಾರಾಟ ಮಾಡಿದ್ದ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಜೊಹರಾ ಅವರ ಮನೆಯನ್ನು ಏಕಾ ಏಕಿ ಜಪ್ತಿ ಮಾಡಿ ಹೆಣ್ಣು ಮಕ್ಕಳು ಸೇರಿದಂತೆ ಏಳು ಮಂದಿಯ ಕುಟುಂಬವನ್ನು ಮನೆಯಿಂದ ಹೊರ ಹಾಕಿದ್ದರು. ಪೊಲೋಸರ ಈ ಕ್ರಮದ ವಿರುದ್ದ ಸಿಪಿಐಎಂ ಮುಖಂಡ ಬಿ.ಎಂ ಭಟ್ ಸಂತ್ರಸ್ತ ಕುಟುಂಬದ ಪರವಾಗಿ ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು ಈ ಮನವಿಯನ್ನು ಪುರಸ್ಕರಿಸಿದ ಸಹಾಯಕ ಆಯುಕ್ತರು ಪೊಲೋಸರು ವ್ಯಾಪ್ತಿ ಮೀರಿ ಕ್ರಮ ಕೈಗೊಂಡಿದ್ದು ಕೂಡಲೇ ಮನೆಯನ್ನು ಅವರಿಗೆ ಹಿಂತಿರುಗಿಸುವಂತೆ ಆದೇಶ ನೀಡಿದೆ.
ಆದೇಶದಲ್ಲಿ ಏನಿದೆ;
ಈ ಪ್ರಕರಣದಲ್ಲಿ ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗಿ, ಸದ್ರಿ ಪ್ರಕರಣದಲ್ಲಿ ತಾವುಗಳು ಕಾನೂನು ವ್ಯಾಪ್ತಿಯನ್ನು ಮೀರಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈಗಾಗಲೇ ಪರವಾನಿಗೆಯಿಲ್ಲದೆ ಜಾನುವಾರು ಸಾಗಾಟ ಮಾಡಿದ ಕೃತ್ಯವನ್ನು ಎಸಗಿದ ವಾಹನ ಹಾಗೂ ಕರುಗಳನ್ನು (3 ಸಂಖ್ಯೆ) ಅಪ್ತಿ ಮಾಡಿ ಸೊತ್ತುಪಟ್ಟಿಯನ್ನು ಈ ಕಚೇರಿಗೆ ಸಲ್ಲಿಸಿರುತ್ತೀರಿ. ಇದರ ಜೊತೆಗೆ ಕೃತ್ಯ ಎಸಗಿದ ಆರೋಪಿ 1 ಮತ್ತು 2 ನೇ ಯವರು – 02 ಮನೆ ಹಾಗೂ ಸ್ವತ್ತುಗಳನ್ನು ಜಪ್ತಿ ಮಾಡಿ ಈ ಕಚೇರಿಗೆ ನಲ್ಲಿಸಿರುತ್ತೀರಿ. ಮುಂದುವರೆದು ಯಾರಿಂದ ಖರೀದಿ ಮಾಡಿದ್ದಾರೋ ಸದ್ರಿ ವ್ಯಕ್ತಿಯ ವಾಸದ ಮನೆಯನ್ನು ಕೂಡಾ ಕೃತ್ಯ ನಡೆದ: 04 ದಿನಗಳ ನಂತರ ಜೊಹರಾರವರು ಹಾಗೂ ಕುಟುಂಬದ 7 ಜನ ವಾಸಿಸುತ್ತಿರುವ ಮನೆಯನ್ನು ಏಕಾ ಏಕಿಯಾಗಿ ಜಪ್ತಿ ಮಾಡಿ ಪದ್ರಿ ವ್ಯಕ್ತಿಗಳಿಗೆ ವಾಸದ ಮನೆಯಿಂದ ಹೊರ ಹಾಕಿರುತ್ತೀರಿ. ಸದ್ರಿ ಮನೆಯಲ್ಲಿ 07 ಜನ ವಾನ ಮಾಡುತ್ತಿದ್ದು ಇದರಲ್ಲಿ 16 ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು, ಹೈಸ್ಕೂಲಲ್ಲಿ ಓದುತ್ತಿರುವ ಒಬ್ಬ ಹುಡುಗ, ಮುದಿ ಪ್ರಾಯದ ಓರ್ವ ಮಹಿಳೆ ಹಾಗೂ ಉಳಿದ ಕುಟುಂಬದ ಸದಸ್ಯರುಗಳು ಮನೆಯಲ್ಲಿ ವಾಸವಾಗಿದ್ದು, ಸಾಯಂಕಾಲ 06:00 ಗಂಟೆಯಿಂದ 7:45 ರವರೆಗೆ ಜಪ್ತಿ ಮಹಜರು ಪ್ರಕ್ರಿಯೆ ಮುಕ್ತಾಯಗೊಳಿಸಿರುದು ತಮ್ಮ ಮಹಜರಿನಿಂದ ತಿಳಿದು ಬಂದಿರುತ್ತದೆ ಹಾಗೂ ತಾವು ಸಲ್ಲಿಸಿದ ವಿಡಿಯೋ ಚಿತ್ರಿಕರಣದ ತುಣಕನ್ನು ಪರಿಶೀಲಿಸಿದಾಗ ಜೊಹರಾ ರವರ ಮನೆಯಲ್ಲಿ ಕೃತ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯ (Evidence) ಕಂಡುಬಂದಿಲ್ಲ.
ಇದರಲ್ಲಿ ತಾವುಗಳು ಕಾನೂನು ವ್ಯಾಪ್ತಿಯನ್ನು ಮೀರಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅದುದರಿಂದ ನಾರಮ್ಮ ವಟ್ಟೂರು ಮನೆ, ಪಟ್ರಮೆ ಗ್ರಾಮ, ಬೆಳ್ತಂಗಡಿ ತಾಲೂಕು ಇವರ ಅಪ್ತಿಯಾದ ವಾಸದ ಮನೆಯನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಸೂಚಿಸಿದೆ ಹಾಗೂ ಕೈಗೊಂಡ ಕ್ರಮದ ಬಗ್ಗೆ ಈ ಕಚೇರಿಗೆ ವರದಿ ಸಲ್ಲಿಸುವುದು ಮತ್ತು ಪದ್ರಿ ಪ್ರಕರಣದಲ್ಲಿ ಕೃತ್ಯ ಎಸಗಿದ 1 ಮತ್ತು 2 ನೇ ಆರೋಪಿಯವರ ಸ್ವತ್ತುಗಳಿಗೆ ಸಂಬಂಧಿಸಿದಂತೆ ಈ ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಆದೇಶ ನೀಡಿದೆ.
