ಮಂಗಳೂರು : ‘ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿ ಕೋಮುಸೌಹಾರ್ದತೆ ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಜಾಮೀನು ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇಂದೂ ಇತ್ಯರ್ಥವಾಗದೆ ಮುಂದೂಡಲ್ಪಟ್ಟಿತು. ಬಿಎನ್‌ಬಿಎಸ್ ಸೆಕ್ಷನ್ 338, 339 ಪ್ರಕಾರ ಜನವಾದಿ ಮಹಿಳಾ ಸಂಘಟನೆಯ ನಾಯಕಿ ಈಶ್ವರಿ ಪದ್ಮುಂಜ ಪರ ಹಿರಿಯ ವಕೀಲ ಸತೀಶನ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಾದ ಮಂಡಿಸಲು ಸಮಾಯಾವಕಾಶ ಕೇಳಿದರು. ಪೊಲೀಸರ ಪರ ಸರ್ಕಾರಿ ವಕೀಲರು ಜಾಮೀನು ಅರ್ಜಿಗೆ ಆರು ಪುಟಗಳ ತಕರಾರು ಅರ್ಜಿ ಸಲ್ಲಿಸಿದ್ದು, ನ್ಯಾಯಾಲವು ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ
ಪ್ರಭಾಕರ ಭಟ್ ತಾನು ಮಾಡಿದ ಭಾಷಣದ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಗೆ ನಿರೀಕ್ಷಣಾ ಜಾಮೀನು ಕೋರಿ ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ 27 ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ‘ಬಲವಂತದ ಕ್ರಮ ತೆಗೆದುಕೊಳ್ಳದಂತೆ ಮಧ್ಯಂತರ ಆದೇಶ’ ನೀಡಿ ಪೂರ್ಣ ಪ್ರಮಾಣದ ವಿಚಾರಣೆ ಮತ್ತು ನಿರೀಕ್ಷಣಾ ಜಾಮೀನು ಸಂಬಂಧ ಅದೇಶವನ್ನು ಅಕ್ಟೋಬರ್ 29 ಕ್ಕೆ ಮುಂದೂಡಿತ್ತು. ಅಕ್ಟೋಬರ್ 29 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ದೂರುದಾರರಾಗಿರುವ ಈಶ್ವರಿ ಪದ್ಮುಂಜ ಪರ ಹಿರಿಯ ವಕೀಲ ಸತೀಶನ್ ಅವರು ಬಿಎನ್‌ಎಸ್‌ಎಸ್ ಸೆಕ್ಷನ್ 338, 339 ಪ್ರಕಾರ ದೂರುದಾರ ಮಹಿಳಾ ಹೋರಾಟಗಾರ್ತಿ ಈಶ್ವರಿ ಪರ ಅರ್ಜಿ ಸಲ್ಲಿಸಿದ್ದರು. ಸಹಜವಾಗಿ ಆರೋಪಿ ವಿರುದ್ಧ ಸರ್ಕಾರಿ ವಕೀಲರಿಗೆ ಮಾತ್ರ ವಾದಿಸುವ ಮತ್ತು ತಕರಾರು ಅರ್ಜಿ ಸಲ್ಲಿಸುವ ಅವಕಾಶ ಇರುತ್ತದೆ.
ದೂರುದಾರರ ಪರ ವಕೀಲರು ತಕರಾರು ಅರ್ಜಿ ಅಥವಾ ವಾದ ಮಂಡಿಸಬೇಕಾದರೆ ಬಿಎನ್‌ಎಸ್‌ಎಸ್ ಸೆಕ್ಷನ್ 338 ಮತ್ತು 339 ರಂತೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಅನುಮತಿ ಕೋರಬೇಕಿರುತ್ತದೆ.
ಅಕ್ಟೋಬರ್ 27 ರಂದು ವಕೀಲ ಸತೀಶನ್ ಅರ್ಜಿಯನ್ನು ಪಡೆದುಕೊಂಡ ನ್ಯಾಯಾಲಯವು, ಪ್ರಭಾಕರ ಭಟ್ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ನವೆಂಬರ್ 4 ಪ್ರಕರಣವನ್ನು ಮುಂದೂಡಿತ್ತು.
ನವೆಂಬರ್ 04 ರಂದು ಅರ್ಜಿ ವಿಚಾರಣೆಗೆ ಬಂದಾಗ ಈಶ್ವರಿ ಪದ್ಮುಂಜ ಪರ ವಕೀಲ ಸತೀಶನ್ ಅವರ ಬಿಎನ್‌ಎಸ್‌ಎಸ್ ಸೆಕ್ಷನ್ 338, 339 ಅರ್ಜಿಗೆ ಪ್ರಭಾಕರ ಭಟ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಿಲ್ಲ. ಅರ್ಜಿ ಸಂಬಂಧ ವಿಸ್ತ್ರತ ವಾದ ಮಂಡಿಸಲು ವಕೀಲ ಸತೀಶನ್ ಅವರು ಸಮಯಾವಕಾಶ ಕೇಳಿದ್ದು ಅರ್ಜಿ ವಿಚಾರಣೆಯನ್ನು ನವೆಂಬರ್ 10 ಕ್ಕೆ ಮುಂದೂಡಲಾಗಿದೆ.








