



ಬೆಳ್ತಂಗಡಿ; ಬಡವರ ಮತ್ತು ಮಧ್ಯಮ ವರ್ಗದ ಜನರಿಗೆ ಅಗತ್ಯವಾದ ಯೋಜನೆಗಳನ್ನು ರೂಪಿಸಿ ಅದನ್ನು ಪ್ರತಿಯೊಬ್ಬರಿಗೆ ತಲುಪಿಸುವ ಧ್ಯೇಯವನ್ನು ರಾಜ್ಯ ಸರಕಾರ ಹೊಂದಿದ್ದು ಯಾವುದೇ ಭೇದ ಭಾವವಿಲ್ಲದೆ ರಾಜ್ಯದ ಜನತೆಗೆ ಇದು ತಲುಪುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಹಾಗೂ ಫಲಾನುಭವಿಗಳಿಗೆ 94 ಸಿ ಮತ್ತು 94 ಸಿಸಿ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು.
“ಮುಖ್ಯಮಂತ್ರಿ
ಸಿದ್ದರಾಮಯ್ಯನವರ ಹಸಿವು ಮುಕ್ತ ಕರ್ನಾಟಕ ಚಿಂತನೆಯಂತೆ ಇಂದಿರಾ ಕ್ಯಾಂಟೀನ್ ಗಳು ಅಗತ್ಯ ಸ್ಥಳಗಳಲ್ಲಿ ನಿರ್ಮಾಣಗೊಳ್ಳುತ್ತಿವೆ. ಪ್ರತಿದಿನ ಬದಲಾವಣೆ ಆಧಾರದಲ್ಲಿ ವಿಶೇಷ ಆಹಾರ ಪದಾರ್ಥಗಳಿಗೆ ವ್ಯವಸ್ಥೆ ಮಾಡಲಾಗಿದೆ. ಮೂಡಬಿದ್ರೆ ಹಾಗೂ ಬೆಳ್ತಂಗಡಿ ಇಂದಿರಾ ಕ್ಯಾಂಟೀನ್ ಗಳ ಅಸಮರ್ಪಕ ಕಾಮಗಾರಿ ಕುರಿತು ಈಗಾಗಲೇ ದೂರುಗಳು ಬಂದಿದ್ದು ತಕ್ಷಣ ಗುತ್ತಿಗೆದಾರರನ್ನು ಕರೆಯಿಸಿ,ಪರಿಶೀಲಿಸಿ ಸಮಸ್ಯೆಯನ್ನು ನಿವಾರಿಸಲಾಗುವುದು” ಎಂದರು.
“ಅನ್ನಭಾಗ್ಯ ಯೋಜನೆಯಲ್ಲಿ ಐದು ಕೆಜಿ ಅಕ್ಕಿಯ ಜತೆ ಕುಟುಂಬ ಸದಸ್ಯರ ಸಂಖ್ಯೆ ಆಧಾರದಲ್ಲಿ ಮುಂದಿನ ಎರಡು ತಿಂಗಳಲ್ಲಿ ಬೇಳೆ,ಎಣ್ಣೆ ಸಕ್ಕರೆ ಹಾಗೂ ಇತರ ಕೆಲವು ಸಾಮಾಗ್ರಿ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದರು. ಅಧಿಕಾರಿಗಳು ಜನರನ್ನು ಗೊಂದಲಕ್ಕೆ ತಳ್ಳದೇ ಸರಕಾರದ ಯೋಜನೆಗಳನ್ನು ಅವರಿಗೆ ತಲುಪಿಸುವ ಕೆಲಸ ಮಾಡಬೇಕು. ಬೆಳ್ತಂಗಡಿ ತಾಲೂಕಿಗೆ ಗೃಹಜೋತಿ ಯೋಜನೆಗೆ 96 ಕೋಟಿ ರೂ. ಅನ್ನಭಾಗ್ಯ ಯೋಜನೆಗೆ 55 ಕೋಟಿ ರೂ. ಗೃಹಲಕ್ಷ್ಮಿ ಯೋಜನೆಗೆ 227 ಕೋಟಿ ರೂ.ಯುವ ನಿಧಿಗೆ 2.14 ಕೋಟಿ ರೂ. ಅನುದಾನ ಇದುವರೆಗೆ ನೀಡಲಾಗಿದ್ದು ಶಕ್ತಿ ಯೋಜನೆಯ ಉಪಯೋಗವನ್ನು 1.62 ಕೋಟಿ ಮಹಿಳೆಯರು ಪಡೆದಿದ್ದಾರೆ” ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ “137 ಮಂದಿಗೆ 94 ಸಿ ಹಾಗೂ 94 ಸಿಸಿ ಹಕ್ಕುಪತ್ರ ಇಂದು ವಿತರಿಸಲಾಗಿದೆ ಅರಣ್ಯ ತೊಡಕಿರುವ 584 ಹಾಗೂ ತಾಂತ್ರಿಕ ಅಡಚಣ 703 ಅರ್ಜಿಗಳನ್ನು ವಿಲೇವಾರಿ ಮಾಡುವ ಕೆಲಸ ತಕ್ಷಣ ನಡೆಯಬೇಕು, ಅಕ್ರಮ ಸಕ್ರಮ, ಕುಮ್ಕಿ, 9/11 ನೀತಿಯನ್ನು ಸರಕಾರ ಸಡಿಲಗೊಳಿಸುವ ಮೂಲಕ ಜನಸಾಮಾನ್ಯರಿಗೆ ನೆರವಾಗಬೇಕು. ಜಿಲ್ಲಾ ಪಂಚಾಯಿತಿ, ಪಿಡಬ್ಲ್ಯೂಡಿ, ಗ್ರಾಮೀಣ ರಸ್ತೆಗಳಿಗೆ ಸರಕಾರ ಹೆಚ್ಚಿನ ಅನುದಾನವನ್ನು ಒದಗಿಸಬೇಕು.ಕೆಂಪು ಕಲ್ಲು ,ಮರಳು ಸಮಸ್ಯೆಯನ್ನು ಶೀಘ್ರ ಪರಿಹರಿಸುವುದು ಅಗತ್ಯ” ಎಂದರು.
ಎಂಎಲ್ ಸಿ ಮಂಜುನಾಥ ಭಂಡಾರಿ ಮಾತನಾಡಿ “ಇಂದಿರಾ ಕ್ಯಾಂಟೀನ್ ಬಡವರ್ಗದ ಜನರಿಗೆ,ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ನೀಡುತ್ತದೆ. ಅಲ್ಪ ದರದಲ್ಲಿ ಶುಚಿ ರುಚಿಯ ಆಹಾರ ಒದಗಿಸುವ ಮೂಲಕ ಹೆಸರುವಾಸಿಯಾಗಿದೆ” ಎಂದರು.
ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಇದರ ಅಧ್ಯಕ್ಷ ಕೆ. ಹರೀಶ್ ಕುಮಾರ್ , ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣೀಕರಣ ಸಂಸ್ಥೆ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ ಜೈನ್, ಕರ್ನಾಟಕ ಪರಿಸರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ ಟಿ., ಉಪಾಧ್ಯಕ್ಷೆ ಗೌರಿ, ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಶೇಖರ ಕುಕ್ಕೇಡಿ, ತಾಲೂಕು ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ತಹಸೀಲ್ದಾರ್ ಪೃಥ್ವಿ ಸಾನಿಕಂ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಉಪಸ್ಥಿತರಿದ್ದರು.
ತಾಪಂ ಇಒ ಭವಾನಿ ಶಂಕರ್ ಸ್ವಾಗತಿಸಿದರು.
ಶಿಕ್ಷಕ ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು
